ಹೇಗೆ ತೇವಾಂಶವನ್ನು ನೀರಿನಿಂದ ಪ್ರತ್ಯೇಕಿಸಲಾಗದೋ, ಹಾಗೂ ಬಿಸಿಯನ್ನು ಬೆಂಕಿಯಿಂದ, ಹಾಗೆಯೇ ಕಾಮನೆಗಳನ್ನು ಮನಸ್ಸಿನಿಂದ ಪ್ರತ್ಯೇಕಿಸಲಾಗಿದು. ಯಾಕೆಂದರೆ, ವರ್ಜಿಸದೇ ಇರುವ ಯೋಚನೆಗಳೇ ಕಾಮನೆಗಳು. ಯೋಚನೆಗಳು ಅಂದರೆ ಅದು ಯೋಚನೆಗಳು – ಅಷ್ಟೇ, ಅದರಲ್ಲಿ ಒಳ್ಳೆಯದು ಅಥವಾ ಕೆಟ್ಟದು, ಮಹೋನ್ನತವಾದದ್ದು ಅಥವಾ ಹಾಸ್ಯಾಸ್ಪದವಾದದ್ದು, ಸರಿ ಅಥವಾ ತಪ್ಪು ಇಲ್ಲ. ಈ ವರ್ಗೀಕರಣವೆಲ್ಲಾ ನೀವು ನಿಯಮಾಧೀನರಾಗಿ ನೀಡುತ್ತಿರುವ ನೇಮಕಾತಿಗಳು ಮಾತ್ರ.

ಮೂಲತಃ ಯೋಚನೆಗಳೆಲ್ಲಾ ಏಕಪ್ರಕಾರ – ತದ್ರೂಪ. ಏನು ಮುಖ್ಯವೆಂದರೆ, ಯೋಜನೆಗಳಲ್ಲ, ಆ ಯೋಜನೆಗಳ ಜೊತೆ ನೀವು ಏನು ಮಾಡುತ್ತೀರಾ ಎಂಬುದು. ಒಂದು ಯೋಚನೆ ಹೊರಹೊಮ್ಮಿದಾಗ, ಅದನ್ನು ಬೆನ್ನಟ್ಟಿದರೆ, ಅದು ಒಂದು ಬಯಕೆಯ ರೂಪ ಪಡೆಯಬಹುದು ಅಥವಾ ಒಂದು ಭಾವನೆ, ನಕಾರಾತ್ಮಕ ಅಥವಾ ಸಕಾರಾತ್ಮಕವಾದದ್ದು.

 ಎಲ್ಲಾ ಕರ್ಮಗಳೂ ಯೋಚನೆಗಳಿಂದಲೇ ಹುಟ್ಟುತ್ತದೆ. ದೀರ್ಘಕಾಲದ ಒಂದು ಯೋಚನೆ ನಿಮ್ಮ ಮನಸ್ಸನ್ನು ಅಸ್ಥಿರಗೊಳಿಸುತ್ತದೆ, ಒಂದು ಶಾಂತ ಕೊಳದಲ್ಲಿ ಮೂಡುವ ಸಣ್ಣ ಅಲೆಗಳ ಹಾಗೆ ನಿಮ್ಮ ಪ್ರಶಾಂತ ಮನಸ್ಥಿತಿಯನ್ನು ಕಲಕುತ್ತದೆ. ಒಂದು ಪರಿಶುದ್ಧವಾದ ಪ್ರಶಾಂತ ಮನಸ್ಸು, ಕಾಮನೆಗಳ ನೆರೆವೇರಿಕೆಯಿಂದ ಅಥವಾ ಪರಿತ್ಯಾಗದಿಂದ ವಿಚಲಿತವಾಗುವುದಿಲ್ಲ; ಏನಿದ್ದರೂ, ಮನಸ್ಸು ಫಲಿತಾಂಶವನ್ನಷ್ಟೇ ಗ್ರಹಿಸುತ್ತದೆ. ಹಾಗಾಗಿ ಇಂದ್ರಿಯಗಳ ತೃಪ್ತಿ, ಮನ್ನಣೆಗಳಿಂದ ದೊರಕುವ ಸಂತೋಷ, ತೃಪ್ತಿಕರ ಪ್ರೀತಿ, ಅಥವಾ ಒಂದು ಸಾಧಾರಣ ಸಿಹಿ ಉಂಡೆ, ಇವೆಲ್ಲದರಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಕರ್ಮದ ಕಾಯ್ದೆಯ ಪ್ರಭಾವವನ್ನು ಬಿಟ್ಟು ಕೊಡಲಾಗದಿದ್ದರೂ, ನಿಸ್ಸಂಶಯವಾಗಿಯೂ ನೀವು ನಿಮ್ಮ ಕಾಮನೆಗಳ ಉತ್ಪಾದನೆ. ನಿಮ್ಮ ಕಾಮನೆಗಳು ನೀವು ಕಾರ್ಯ ಮಾಡಲು, ಅಥವಾ ನಿರ್ದಿಷ್ಟ ಮಾರ್ಗದಲ್ಲಿ ನಡೆಯಲು ಪ್ರಚೋದಿಸುತ್ತದೆ. ನೀವು ನಿಮ್ಮ ಕಾಮನೆಗಳ ಸ್ವಭಾವವನ್ನು ಅರಿಯುವ ಮೊದಲು, ಮನಸ್ಸಿನ ಸ್ವಭಾವವನ್ನು ಅರಿತುಕೊಳ್ಳಲೇಬೇಕು.

ಒಂದು ಕಾಮನೆ ಈಡೇರಿದಾಗ, ಅದು ನಿಮಗೆ ತಾತ್ಕಾಲಿಕ ತೃಪ್ತಿ ಹಾಗೂ ಸಂತೋಷ ನೀಡುತ್ತದೆ. ಪರಿಣಾಮ ಕೂಡ ನಿಮ್ಮ ಕಾಮನೆಯಷ್ಟೇ ಸೂಕ್ಷ್ಮ ಹಾಗೂ ಹಿಡಿತಕ್ಕೆ ಸಿಗದಿರುವಂತದ್ದು. ಕಾಮನೆಗಳು ಶಾಶ್ವತವಾದ ತೃಪ್ತಿಯನ್ನು ನೀಡುವುದಾಗಿದ್ದರೆ, ಅವುಗಳನ್ನು ಈಡೇರಿಸಿಕೊಳ್ಳುವುದರಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ, ಒಂದು ಕಾಮನೆ ಈಡೇರಿದಾಗ ಅಗಣಿತ ಕಾಮನೆಗಳು ತಲೆದೋರುತ್ತದೆ. ಒಮ್ಮೆ ನಿಮಗೆ ಕಾಮನೆಗಳ ಸ್ವಭಾವ ಅರ್ಥವಾದರೆ, ಅವು ನಿಮ್ಮನ್ನು ಪೀಡಿಸುವುದಿಲ್ಲ. ನಿಮಗೆ ನಿಮ್ಮ ಪ್ರಶಾಂತ ಮನಸ್ಸಿನ ಮೇಲೆ ಬಲವಾದ ಹಿಡಿತ ಸಿಕ್ಕಿದರೆ, ಒಂದು ಯೋಚನೆ ಉದ್ಭವವಾದರೂ, ಕೂಡಲೇ ಅದು ಕಣ್ಮರೆಯಾಗಿಬಿಡುತ್ತದೆ. ಕಾಮನೆಗಳನ್ನು ವರ್ಗೀಕರಿಸಲು ಆಗುವುದಿಲ್ಲ, ಆದರೂ ಸುಲಭವಾಗಿ ಅರ್ಥವಾಗಲೆಂದು, ನಾನು ಅದನ್ನು ನಿಮಗಾಗಿ ವರ್ಗೀಕರಿಸುತ್ತಿದ್ದೇನೆ.

ದೈಹಿಕ ಕಾಮನೆಗಳು:

 ಇಂದ್ರಿಯಗಳನ್ನು ತೃಪ್ತಿಗೊಳಿಸುವ ಎಲ್ಲಾ ರೀತಿಯ ಕಾಮನೆಗಳು, ದೈಹಿಕ ಕಾಮನೆಗಳು. ಇವುಗಳು ಈಡೇರಿದಾಗ ಉಂಟಾಗುವ ಪರಿಣಾಮವು ಬಹಳ ಆನಂದಕರವಾಗಿರುವುದೆಂದು ನೀವು ಊಹಿಸಿಕೊಳ್ಳುತ್ತೀರ. ನೀವು ನಿರೀಕ್ಷಿಸುತ್ತಿರುವ ಆ ಸಂತೋಷ, ನಿಮ್ಮನ್ನು, ಆ ಕಾಮನೆಗಳನ್ನು ಪೂರೈಸಿಕೊಳ್ಳುವುದಕ್ಕೆ ಬದ್ಧರಾಗುವಂತೆ ಪ್ರೇರೇಪಿಸುತ್ತದೆ. ಇದರ ಫಲಿತಾಂಶ, ನಿಮ್ಮ ಕಾರ್ಯಾಚರಣೆಗಳು, ಭಾವನೆಗಳು ಹಾಗೂ ಬುದ್ಧಿ ಎಲ್ಲಾ ಆ ಕಾಮನೆಯನ್ನು ಪೂರೈಸಿಕೊಳ್ಳುವತ್ತ ಕಾರ್ಯನಿರತವಾಗಿರುತ್ತದೆ. ಈ ಕಾಮನೆಗಳೆಲ್ಲಾ ಸಕ್ರಿಯವಾಗಿ ಅತೃಪ್ತಿಯಿಂದ ಇರಬಹುದು, ಅಥವಾ ಶಾಶ್ವತವಾಗಿ ಸುಪ್ತವಾಗಿರಬಹುದು, ಕೆಲವೂಮ್ಮೆ ಎರಡೂ ಸಹ.

ದೇಹದ ಮೂಲಕ ಆನಂದಿಸುವುದೆಲ್ಲಾ ಪ್ರಾಯಶಃ ಇಂದ್ರಿಯಗಳನ್ನು ತೃಪ್ತಿಗೊಳಿಸುವಂತಹದ್ದು. ಬಹಳಷ್ಟು ಜನರು ಇವುಗಳನ್ನು ತೃಪ್ತಿಗೊಳಿಸುವುದರಲ್ಲೇ ತಮ್ಮ ಜೀವನವನ್ನೆಲ್ಲಾ ಕಳೆಯುತ್ತಾರೆ. ಅವರು ಪ್ರತಿಯೊಂದನ್ನೂ ದೇಹದ ಮೂಲಕವೇ ಅನುಭವಿಸುತ್ತಾರೆ, ದೇಹಕ್ಕಾಗಿ ಜೀವಿಸುತ್ತಾರೆ ಹಾಗೂ ಅದಕ್ಕಾಗಿ ಸಾಯುತ್ತಾರೆ. ಅವರು ದೇಹದ ನಿಷ್ಠಾವಂತ, ವಿಧೇಯ ಹಾಗೂ ಪ್ರಶ್ನಾತೀತ ಸೇವಕರಾಗಿ ಉಳಿಯುತ್ತಾರೆ. ಅವರ ಜೀವನವೆಲ್ಲಾ ದೇಹದ ಅಗತ್ಯಗಳಾದ, ಆಹಾರ, ಉಡುಗೆ, ಸಂಯೋಗ, ಸೌಲಭ್ಯ, ಆರೈಕೆ, ಮುಂತಾದವುಗಳ ಸುತ್ತಲೇ ಸುತ್ತುತ್ತಿರುತ್ತದೆ. ದೈಹಿಕ ಕಾಮನೆಗಳ ಪೂರೈಕೆ ಮೂಲತಃ ದೇಹದ ಯೋಗಕ್ಷೇಮದ ಜೊತೆ ಸಂಯೋಜಿಸಲಾಗುತ್ತದೆ. ಏನೇ ಮಾಡಿದರೂ ಮಾನವನ ದೇಹ ಕ್ಷೀಣಿಸುತ್ತಲೇ ಹೋಗುತ್ತದೆ, ಮತ್ತು ಹಲವರು ಅದನ್ನು ಪೋಷಿಸುವುದರಲ್ಲೇ ನಿರಂತರ ಪ್ರಯತ್ನಶೀಲರಾಗಿರುತ್ತಾರೆ. ಅದೊಂದು ವ್ಯರ್ಥ ಪರಿಶ್ರಮ.

ಭಾವನಾತ್ಮಕ ಕಾಮನೆಗಳು:

 ಪ್ರೀತಿ, ಪರಸ್ಪರ ಸ್ಪಂದನದ ಅವಶ್ಯಕತೆ, ಮಾನ್ಯತೆ, ಹಾಗೂ ಹಂಚಿಕೊಳ್ಳುವುದು, ಈ ವರ್ಗಕ್ಕೆ ಸೇರುತ್ತದೆ. ಇದು ಅಪ್ರಬುದ್ಧ ಮನಸ್ಸಿನ ಪರಿಣಾಮ, ಹಾಗೂ ನಿಮ್ಮ ಪ್ರಸ್ತುತ ಜೀವನದಿಂದ ಕಟ್ಟುಪಾಡುಗಳಿಗೆ ಒಳಗಾದ ಮನಸ್ಸಿನಿಂದ ಹುಟ್ಟಿದ್ದು, ಮತ್ತು ಪ್ರಾಯಶಃ, ನಿಮ್ಮ ಹಿಂದಿನ ಜನ್ಮದ ಕರ್ಮದ ಅವಶೇಷಗಳೂ ಇರಬಹುದು. ಈ ಕಾಮನೆಗಳನ್ನು ಪೂರೈಸಿಕೊಳ್ಳಲು ನಿಮ್ಮನ್ನು ಹೊರಮುಖವಾಗಿ ಹುಡುಕುವಂತೆ ಪ್ರಚೋದಿಸುತ್ತದೆ. ನಿಮ್ಮ ಜೊತೆ ಒಡನಾಟಕ್ಕೆ, ಹಂಚಿಕೊಳ್ಳುವುದಕ್ಕೆ, ಮುಂತಾದವುಗಳಿಗೆ ನಿಮಗೆ “ಯಾರಾದರೂ” ಬೇಕು. ನಿಮ್ಮ ಅಂತರಂಗದ ನೆರವೇರಿಕೆಗಳಿಗೆ ಬಾಹ್ಯದಲ್ಲಿ ಹುಡುಕುವುದು, ಬ್ರಹ್ಮಾಂಡದ ಒಂದು ತುದಿಯಿಂದ ಇನ್ನೊಂದು ತುದಿಯ ಅನ್ವೇಷಣೆಗೆ ಹೊರಟಿರುವಂತಿದೆ. ನಿಮ್ಮ ಕೊನೆಯ ಉಸಿರಿರುವ ತನಕ, ನೀವು ಇವುಗಳ ಕೈಗೊಂಬೆಯಾಗಿ ಉಳಿಯುವಿರಿ.

ದೇಹಕ್ಕೆ ವಯಸ್ಸಾಗಿ, ದುರ್ಬಲಗೊಂಡಂತೆ ದೈಹಿಕ ಕಾಮನೆಗಳು ಕ್ಷೀಣಿಸುತ್ತದೆ, ಆದರೆ ಭಾವನಾತ್ಮಕ ಕಾಮನೆಗಳು ಇನ್ನೂ ಜೀವಂತವಾಗಿರುತ್ತದೆ. ನೀವು ಅವಲಂಬಿತರಾದಾಗ (ಇದರ ಬಗ್ಗೆ ಇನ್ನೂ ತಿಳಿಯಲು ‘ನನ್ನ ಸತ್ಯ‘ವನ್ನು ಓದಿ), ಹಾಗೂ ನಿಮ್ಮ ಸಹಜತೆಯನ್ನು ಮರೆತಾಗ, ಈ ಕಾಮನೆಗಳು ಉದ್ಭವಿಸುತ್ತದೆ. “ಭಾವನಾತ್ಮಕ ಅವಶ್ಯಕತೆಗಳು” ಇದು ಒಂದು ಅನುಚಿತ ಬಳಕೆಯಾಗಿದೆ. ಭಾವನೆಗಳು ನಿಮ್ಮ ಮನಸ್ಸನ್ನು ಆಧರಿಸಿ ಆದ ಒಂದು ಉತ್ಪನ್ನ, ಹಾಗೂ ಆ ಮನಸ್ಸಿಗೆ ಯಾವ ಅವಶ್ಯಕತೆಗಳೂ ಇಲ್ಲ. ಒಂದು ಕಸಾಯಿಖಾನೆಯಲ್ಲಿನ ದೃಶ್ಯ ನಿಮ್ಮಲ್ಲಿ ನಕಾರಾತ್ಮಕ ಭಾವವನ್ನು ಪ್ರಚೋದಿಸಬಹುದು, ಆದರೆ ಅದರ ಮಾಲೀಕನಿಗೆ ಸಕಾರಾತ್ಮಕವಾಗಿರುತ್ತದೆ, ಹಾಗೂ ಯಂತ್ರ ನಿರ್ವಾಹಕನು ತಟಸ್ಥನಾಗಿರುತ್ತಾನೆ. ಇದೆಲ್ಲಾ ನೀವು ಯಾವ ಕಟ್ಟುಪಾಡುಗಳಿಗೆ ಒಳಗಾಗಿರುವಿರಿ ಎಂಬುದರ ಮೇಲೆ ಅವಲಂಬಿಸಿರುತ್ತದೆ. ನೀವು ನಿಮ್ಮ ಸ್ವಾಭಾವಿಕ ಗುಣವನ್ನು ಕಂಡುಕೊಂಡ ಮೇಲೆ, ನಂತರ ಅದೇ ಸ್ಥಿತಿಯನ್ನು ಕಾಪಾಡಿಕೊಂಡು ಬಂದರೆ, ಭಾವನಾತ್ಮಕ ಕಾಮನೆಗಳು ಕಣ್ಮರೆಯಾಗುತ್ತದೆ.

ಬೌದ್ಧಿಕ ಕಾಮನೆಗಳು:

  ಕಟ್ಟುಪಾಡುಗಳಿಗೆ ಒಳಗಾದ, ಬಾಹ್ಯ ಕೇಂದ್ರಿಕೃತವಾದ ಮನಸ್ಸು, ದೈಹಿಕ ಹಾಗೂ ಭಾವನಾತ್ಮಕ ಕಾಮನೆಗಳಿಂದ ತಾತ್ಕಾಲಿಕ ತೃಪ್ತಿಯನ್ನು ಅನುಭವಿಸಿದಾಗ, ಬೌದ್ಧಿಕ ಕಾಮನೆಗಳು ಹುಟ್ಟಿಕೊಳ್ಳುತ್ತದೆ. ಇದು ಒಬ್ಬ ವ್ಯಕ್ತಿಗೆ ಯಾವುದಾದರೂ ಒಂದು ಹೊಸದನ್ನು ಸೃಷ್ಟಿಸುವುದಕ್ಕೆ ಅಥವಾ ನಿಸ್ವಾರ್ಥವಾಗಿರುವಂತೆ ತೋರುವ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಇದರಲ್ಲಿ ಅನುಭವಿಸುವ ಸಾರ್ಥಕತೆ ಮೊದಲೆರಡು ಕಾಮನೆಗಳಿಗಿಂತ ದೀರ್ಘವಾಗಿ ಉಳಿಯುತ್ತದೆ.

ಬೇರೆಯದೆಲ್ಲಾ ಸುಗಮವಾಗಿ ಸಾಗುತ್ತಿರುವಾಗ, ಇಂದ್ರಿಯಗಳ ಸುಖ ಹಾಗೂ ಭಾವನಾತ್ಮಕ ಅವಶ್ಯಕತೆಗಳಷ್ಟೇ ಸಾಕಾಗುವುದಿಲ್ಲ ಎಂದೆನಿಸಿದಾಗ, ಬೌದ್ಧಿಕ ಕಾಮನೆಗಳು ಹುಟ್ಟುತ್ತವೆ. ಸ್ವಭಾವತಃ ಇದರಿಂದ ಒಂದು ಮಟ್ಟದ ಅರಿವು ದೊರೆಯುತ್ತದೆ. ಆದರೂ, ಒಂದು ಅಹಂಕಾರಿ, ಅಸ್ಥಿರ ಹಾಗೂ ಅಜ್ಞಾನಿ ಮನಸ್ಸು ನಿಮ್ಮನ್ನು ಬಂಧಿಸಿರುತ್ತದೆ. ಸಾಕಷ್ಟು ಸಮಯ ಹಾಗೂ ಶಕ್ತಿಯನ್ನು ಇದರಲ್ಲಿ ವಿನಿಯೋಗಿಸಬಹುದು, ಆದರೂ ಮೊದಲೆರಡು ಕಾಮನೆಗಳು ನಿಮ್ಮನ್ನು ಬಿಡುವುದಿಲ್ಲ.

ಪ್ರಧಾನ ಕಾರಣವೆಂದರೆ, ನೀವು ನಿಮ್ಮ ಮನಸ್ಸನ್ನು ಸ್ಥಿರಗೊಳಿಸುವುದರ ಬದಲು ಸುಮ್ಮನೆ ಅದನ್ನು ಬೇರೆ ಕಡೆಗೆ ತೊಡಗಿಸಿಕೊಂಡಿದ್ದೀರಿ. ಆದರೂ ಸಹ, ಅನೇಕ ವೇಳೆ, ಈ ಪ್ರಯತ್ನಗಳು ಸಮಾಜಕ್ಕೆ ಒಂದು ಮೌಲ್ಯವಾದದ್ದನ್ನು ಸೃಷ್ಟಿಸಿಕೊಡುತ್ತದೆ. ದತ್ತಿ ಸಂಸ್ಥೆಗಳನ್ನು ಆರಂಭಿಸುವುದು, ಬೌದ್ಧಿಕ ಅಥವಾ ಆಧ್ಯಾತ್ಮಿಕ ಅನ್ವೇಷಣೆಯತ್ತ ಕೆಲಸ ಮಾಡುವುದು, ಸಾಮಾಜಿಕ ಅಥವಾ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು, ಇವೆಲ್ಲಾ ಬೌದ್ಧಿಕ ಕಾಮನೆಗಳಿಗೆ ಉದಾಹರಣೆಗಳು. ಮೊದಲೆರಡು ಕಾಮನೆಗಳಿಗಿಂತ ಇದು ನಿಮ್ಮ ಆಂತರಿಕ ಪಯಣಕ್ಕೆ ಸಹಾಯಕವಾಗಿದೆ. ಶ್ರೇಷ್ಠ ಚಿಂತಕರು, ಸಂಶೋಧಕರು, ಹಾಗೂ ವಿಜ್ಞಾನಿಗಳು, ಬೌದ್ಧಿಕ ಕಾಮನೆಗಳ ಪರಿಣಾಮದಿಂದ ಆಗಿರುತ್ತಾರೆ.

ಅತೀಂದ್ರಿಯ ಕಾಮನೆ:

 ಮೊದಲ ಮೂರರಿಂದ ಭಿನ್ನವಾಗಿ, ಇದು ಯಾವಾಗಲೂ ಏಕವಚನದಲ್ಲಿ ಇರುತ್ತದೆ. ನಿಮ್ಮ ಸಹಜತೆಯನ್ನು ಕಂಡುಕೊಳ್ಳುವ ಉತ್ಕಟ ಬಯಕೆಯೊಂದೇ ಉಳಿದಾಗ, ಅರ್ಧ ಕೆಲಸ ಮುಗಿದಂತೆ. ನಿಮ್ಮಲ್ಲಿ ಈ ಬಯಕೆ ಬರುವ ಸಾಧ್ಯತೆ ಯಾವಾಗ ಎಂದರೆ, ತೃಪ್ತಿಪಡಿಸಲು ಆಗದಷ್ಟು ಅನಂತವಾಗಿರುವ ಮೊದಲ ಮೂರು ಕಾಮನೆಗಳನ್ನು ತೃಪ್ತಿಪಡಿಸುವ ನಿರರ್ಥಕ ಪ್ರಯತ್ನದ ಅರಿವಾದಾಗ.

ಅತೀಂದ್ರಿಯ ಕಾಮನೆಯನ್ನು ಪೂರೈಸಿಕೊಂಡಾಗ, ಅದು ನಿಮ್ಮನ್ನು ಅಜ್ಞಾನದ ಸಂಕೋಲೆಗಳಿಂದ ಮುಕ್ತಗೊಳಿಸಿ, ಎಲ್ಲಾ ಕಟ್ಟುಪಾಡುಗಳ ಬಂಧನದಿಂದ ಬಿಡುಗಡೆಗೊಳಿಸುತ್ತದೆ. ಸ್ವಭಾವತಃ ಈ ಕಾಮನೆಯು, ನಿಮ್ಮನ್ನು ನೀವು ಕಂಡುಕೊಳ್ಳುವ ಒಂದು ಕಟ್ಟಕಡೆಯ ಶೋಧನೆ. ಜಾಸ್ತಿ ಹೇಳುವುದಿಲ್ಲ, ಪ್ರಪಂಚ ಎಂದಾದರೂ ನೋಡಿರುವ ಕೃಷ್ಣ, ಕ್ರಿಸ್ತ, ಬುದ್ಧ, ಮಹಾವೀರ ಅಥವಾ ಶ್ರೇಷ್ಠ ಬೋಧಕ, ಪ್ರವಾದಿ ಅಥವಾ ಚಿಂತಕ ನೀವಾಗಬಹುದು.

ದೈಹಿಕ ಕಾಮನೆಗಳಿಗೆ, ನಿಮ್ಮ ಮಿಥ್ಯಾ ಅಹಂಕಾರ ಒಂದು ಭದ್ರ ಕೋಟೆಯಂತೆ, ಹಾಗೂ ಆ ಕಾಮನೆಗಳನ್ನು ಪೂರೈಸುವುದರಿಂದ ಕೋಟಿ ಇನ್ನಷ್ಟು ಭದ್ರವಾಗುತ್ತದೆ. ನಿಮ್ಮ ಭಾವನಾತ್ಮಕ ಕಾಮನೆಗಳು ಅಹಂಗೆ ಉದ್ದೀಪನ ನೀಡುತ್ತದೆ, ಹಾಗೂ ಬೌದ್ಧಿಕ ಕಾಮನೆಗಳು ತೃಪ್ತಿ ನೀಡುತ್ತದೆ. ಅಹಂ ಇದು ಒಂದು ಆಳವಾದ ವಸ್ತು ವಿಷಯ, ಇದರ ಬಗ್ಗೆ ಇನ್ನೊಮ್ಮೆ, ಸಧ್ಯದಲ್ಲೇ ವಿವರಿಸುತ್ತೇನೆ.

ಸಧ್ಯಕ್ಕೆ ಇಷ್ಟು ಅರ್ಥ ಮಾಡಿಕೊಳ್ಳಿ, ನಿಮ್ಮ ಮಿಥ್ಯಾ ಅಹಂ ಎನ್ನುವುದು, ನೀವು ಯುಗಯುಗಗಳಿಂದ ಪ್ರಪಂಚವನ್ನು, ಬಾಹ್ಯ ಹಾಗೂ ನೈಜ ವಿದ್ಯಮಾನಗಳು ಎಂದುಕೊಂಡು ಅನುಭವಿಸುತ್ತಿರುವ ಕಾರಣದಿಂದ ಆಗಿರುವ ಕರ್ಮದ ಮುದ್ರೆಗಳ ಶೇಖರಣೆಗಳು.

ನೀವು ಈರುಳ್ಳಿ ಸಿಪ್ಪೆಯನ್ನು ಸುಲಿಯುತ್ತಾ ಹೋದಂತೆ, ಕೊನೆಯಲ್ಲಿ ಏನೂ ಉಳಿಯುವುದಿಲ್ಲ. ಅದೇ ರೀತಿ, ನೀವು ನಿಮ್ಮನ್ನು ಶುದ್ಧೀಕರಿಸಿಕೊಳ್ಳುತ್ತಾ ಹೋದಂತೆ ಅಹಂನ ಯಾವುದೇ ಕುರುಹು ಉಳಿಯುವುದಿಲ್ಲ, ಯಾಕೆಂದರೆ, ಅಹಂ ಎನ್ನುವುದು, ಅಶುದ್ಧತೆ ಹಾಗೂ ಅಜ್ಞಾನದಿಂದ ನಿರ್ಮಿತವಾಗಿದೆ, ಸ್ಪರ್ಶಕ್ಕೆ ಗೋಚರಿಸದಿದ್ದರೂ, ಘನವಾದ ಅಂಶವಾಗಿದೆ.

ದೈಹಿಕ, ಭಾವನಾತ್ಮಕ ಹಾಗೂ ಬೌದ್ಧಿಕ ಕಾಮನೆಗಳು ಪೂರೈಸದಿದ್ದಾಗ, ಕ್ರಮವಾಗಿ ನಿಮ್ಮ ಅಹಂ ಛಿದ್ರಗೊಳ್ಳುತ್ತಾ, ಬಾಧೆಗೊಳ್ಳುತ್ತಾ, ಹಾಗೂ ತದ್ವಿರುದ್ಧವಾಗಿ ಮಾರ್ಪಾಡಾಗುತ್ತದೆ ಹೋಗುತ್ತದೆ. ಇದಕ್ಕೆ ವಿರೋಧಾಭಾಸವಾಗಿ, ಅತೀಂದ್ರಿಯ ಕಾಮನೆ ಪೂರೈಸದಿದ್ದಾಗ, ನಿಮ್ಮಲ್ಲಿ ನಿರಾಸಕ್ತಿ ಉಂಟಾಗಿ, ನೀವು ನಿಮ್ಮ ಮೂಲವನ್ನು ಅರಿಯಲು ಇನ್ನೂ ಹೆಚ್ಚು ಕಾರ್ಯೋನ್ಮುಖರಾಗುವಂತೆ ಪ್ರೇರೇಪಿಸುತ್ತದೆ. ಮತ್ತು ಅದರ ಅರಿವಾದ ನಂತರ, ನಿಮ್ಮ ಅಹಂ ಸಂಪೂರ್ಣವಾಗಿ ವಿಲೀನವಾಗಿ ಬಿಡುತ್ತದೆ. ಮೊದಲೆರಡು ಕಾಮನೆಗಳು ನಿಮ್ಮನ್ನು ಬಾಹ್ಯ ಪ್ರಪಂಚದಲ್ಲಿ ಆನಂದವನ್ನು ಹುಡುಕುವಂತೆ ಮಾಡುತ್ತದೆ. ಆ ಶಾಶ್ವತವಾದ ಆನಂದ ಹೊರಗೆಲ್ಲೂ ದೊರೆಯುವುದಿಲ್ಲ. ಆದರೆ, ಹೊರ ಪ್ರಪಂಚದಿಂದ ನಿರಂತರ ಆನಂದವನ್ನು ಪಡೆಯಬೇಕೆಂದು ನೀವು ಪ್ರಾಮಾಣಿಕ ಹಾಗೂ ಅವಿರತ ಪ್ರಯತ್ನ ಮಾಡುತ್ತಾ ಹೋದಂತೆ, ನಿಮಗೇ ಗೊತ್ತಿಲ್ಲದಂತೆ ನೀವು ಆ ತರಹದ ಕಾಮನೆಗಳನ್ನು ಇನ್ನಷ್ಟು ಸೃಷ್ಟಿಸುತ್ತಾ ಹೋಗುವಿರಿ.

ತರ್ಕಬದ್ಧವಾಗಿ ವಿಶ್ಲೇಷಿಸಿರುವ ಸತ್ಯ, ಹಾಗೂ ಪರಿಕಲ್ಪನೆಯ ದಾರದಿಂದ, ನಿಮ್ಮ ಶಾಂತಿ ಹಾಗೂ ನೆಮ್ಮದಿಯ ಉಡುಗೆಯು ಹೆಣೆಯಲ್ಪಟ್ಟಿದ್ದರೆ, ಅದು ನಿಮಗೇ ತಿಳಿಯದಂತೆ ಹಠಾತ್ತನೆ ಸುರುಳಿ ಬಿಚ್ಚಿಕೊಳ್ಳುತ್ತದೆ, ಸುಪ್ತ ಬಯಕೆಗಳು ಸ್ಫೋಟಗೊಳ್ಳುತ್ತದೆ. ನೀವು ಅದರ ಸ್ವಭಾವವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಮೃಗವನ್ನು ಪಳಗಿಸಲು ಸಾಧ್ಯ. ಕಾಮನೆಗಳನ್ನು ಸಂಪೂರ್ಣವಾಗಿ ನಿವಾರಿಸುವ ಮೊದಲು, ಅದನ್ನು ಅರ್ಥಮಾಡಿಕೊಳ್ಳಬೇಕು, ಆಮೇಲೆ ಪಳಗಿಸಬೇಕು, ನಂತರ ಅದರ ಮೇಲೆ ಅಧಿಪತ್ಯ ಸಾಧಿಸಬೇಕು ಹಾಗೂ ನಂತರ, ವಶಪಡಿಸಿಕೊಳ್ಳಬೇಕು, ಆಮೇಲೆ ಅದನ್ನು ಸಂಪೂರ್ಣ ನಿವಾರಿಸಬೇಕು.

ಏಕಾಗ್ರತೆ ಧ್ಯಾನ ನಿಮ್ಮ ಮನಸ್ಸನ್ನು ಸ್ಥಿರಗೊಳಿಸುತ್ತದೆ, ಹಾಗಾಗಿ ಕಾಮನೆಗಳನ್ನೂ ಸಹ. ಚಿಂತನಶೀಲ ಧ್ಯಾನ ಅಥವಾ ಪರಿಶುದ್ಧ ಭಕ್ತಿ, ಕಾಮನೆಗಳನ್ನು ಸಂಪೂರ್ಣ ನಿರ್ನಾಮ ಮಾಡುತ್ತದೆ. ಕೊನೆಗೆ, ಪ್ರತಿಬಾರಿ, ಬಯಕೆ ಹುಟ್ಟಿದಾಗಲೂ ನಿಮ್ಮ ಮನಸ್ಸನ್ನು ಅದರಿಂದ ದೂರ ಸರಿಸಲು ಕಲಿಯಬೇಕು. ಅಭ್ಯಾಸ ಮಾಡುತ್ತಾ ಹೋದಂತೆ, ನೀವು ನೋಡುತ್ತೀರಿ ಕಾಮನೆಗಳು ವಾಸ್ತವವಾಗಿ ಯಾವುದೇ ಆಂತರಿಕ ಬೆಲೆ ಇಲ್ಲದ ಕೇವಲ ಯೋಚನೆಗಳು ಎಂದು.

ಒಂದು ಯೋಚನೆ ಹೊರಹೊಮ್ಮುತ್ತಿದ್ದಂತೆ ಅದನ್ನು ಪತ್ತೆ ಹಿಡಿಯುವುದಕ್ಕೆ ಮನಸ್ಸು ಸದಾ ಉಪಸ್ಥಿತ ಹಾಗೂ ಎಚ್ಚರದಿಂದರಬೇಕು – ಹೇಗೆ ವಿಮಾನ ನಿಲ್ದಾಣದಲ್ಲಿ ಭದ್ರತೆಯ ವ್ಯವಸ್ಥೆ ಇರುತ್ತದೆಯೋ ಹಾಗೆ. ಅದು, ನೀವು ನಿಮ್ಮ ಜೇಬಿನಲ್ಲಿ ಚಿಲ್ಲರೆ ಇಟ್ಟುಕೊಂಡು ಹೋದರೂ, ಕೆಂಪು ದೀಪ ತೋರಿಸಿ ಶಬ್ದ ಮಾಡುತ್ತದೆ. ದೈಹಿಕ ಕಾಮನೆಗಳಿಂದ ಬಿಡುಗಡೆ ಹೊಂದಲು ಚಿಂತನೆ ಹಾಗೂ ನಿಗ್ರಹದ ಅಗತ್ಯವಿದೆ. ಭಾವನಾತ್ಮಕ ಕಾಮನೆಗಳ ನಿರ್ಮೂಲನೆಗೆ ಪರ್ಯಾಲೋಚನೆ ಹಾಗೂ ನಿರಾಸಕ್ತಿಯ ಅಗತ್ಯವಿದೆ.

ಬೌದ್ಧಿಕ ಕಾಮನೆಗಳಿಂದ ಮುಕ್ತಿ ಹೊಂದಲು ಬುದ್ಧಿಶಕ್ತಿ ಹಾಗೂ ಆತ್ಮಾವಲೋಕನದ ಅಗತ್ಯವಿದೆ. ಅತೀಂದ್ರಿಯ ಕಾಮನೆಗಳ ಪೂರೈಕೆಗೆ ಈ ಮುಂಚೆ ಹೇಳಿದ ಎಲ್ಲಾ ವಿಧಾನಗಳಲ್ಲಿ ದೃಢವಾದ ಒಪ್ಪಿಗೆ, ಮತ್ತು ನೀವು ಭಕ್ತರಾಗಿದ್ದರೆ, ಸಂಪೂರ್ಣ ಶರಣಾಗತಿ, ಯೋಗಿಯಾಗಿದ್ದರೆ ದೃಢವಾದ ಧ್ಯಾನದ ಅಭ್ಯಾಸ ಅಗತ್ಯವಾಗುತ್ತದೆ.

ಕಾಮನೆಗಳು ಬಾಗಿಲು ತಟ್ಟಿದಾಗ ಗಾಬರಿಗೊಳ್ಳುವುದು ಬೇಡ, ಅದು ತುಂಬಾ ಸ್ವಾಭಾವಿಕ. ಯುದ್ಧದಲ್ಲಿ ಹೋರಾಡದೇ ಗೆಲ್ಲುವುದು, ರಾಜಿಯಾಗದೇ ಒಂದು ಒಪ್ಪಂದಕ್ಕೆ ಬರುವುದು ಮುಖ್ಯ. ನಿಮ್ಮ ಸ್ವಾಭಾವಿಕತೆಯನ್ನು ಕಂಡುಕೊಂಡ ಮೇಲೆ ನಿಮ್ಮ ಅಗತ್ಯಗಳ ಅಥವಾ ಬಯಕೆಗಳ ಬಗ್ಗೆ ಯಾವುದೇ ಭ್ರಮೆ ಉಳಿಯುವುದಿಲ್ಲ.

ಕಾಮನೆಗಳು ಮನಸ್ಸೆಂಬ ಮರದಲ್ಲಿನ ಅತ್ಯಾಕರ್ಷಕ ಹಣ್ಣುಗಳು. ಅವುಗಳನ್ನು ಎಷ್ಟಂತ ಉದುರಿಸಬಹುದು ಅಥವಾ ಕೀಳಬಹುದು; ನೀವು ಮರದ ಮೂಲಕ್ಕೇ ಹೋಗಬೇಕು, ಮತ್ತು ಸೂಕ್ತವಾಗಿ ಹೇಳಿದ್ದಾರೆ, ಮನಸ್ಸು ಎನ್ನುವುದು ಕಾಮನೆಗಳ ಮರದ ಮೂಲ ಎಂದು. ನಿರೀಕ್ಷೆಗಳು ಎನ್ನುವುದು ಕಾನೂನು ಬಾಹಿರವಾಗಿ ಹುಟ್ಟಿದ ಮಕ್ಕಳು – ಬಯಕೆಗಳು ಮಲ ಸೋದರ-ಸೋದರಿಯರು, – ಇವು ಅಪ್ರಬುದ್ಧ ಹಾಗೂ ಕಟ್ಟುಪಾಡುಗಳಿಗೆ ಒಳಪಟ್ಟ ಮನಸ್ಸಿನ ಮಕ್ಕಳು. ಒಮ್ಮೆ ಕಾಮನೆಯ ಜೊತೆ ವಿವಾಹವಾದರೆ, ತುಂಬಾ ದಿನಗಳ ಕಾಲ ಅದರ ಮಗುವಿಗೆ ಆಧಾರವಾಗಿರಲು ತಯಾರಾಗಿರಿ. ಈಗಾಗಲೇ ಇರುವ ಬೇರೆ ಕಾಮನೆಗಳ ಜೊತೆಗಿನ ಸಂಬಂಧ, ಹಾಗೂ ಅದರಿಂದ ಇರುವ ನಿರೀಕ್ಷೆಗಳು, ನೀವೇ ಲೆಕ್ಕ ಹಾಕಿಕೊಳ್ಳಿ. ಜ್ಞಾನಿಗಳು ಹೇಳಿದ್ದಾರೆ, ಪ್ರಾಮಾಣಿಕವಾಗಿರುವುದು ಲಾಭದಾಯಕವೆಂದು.

ಶಾಂತಿ.

ಸ್ವಾಮಿ

Translated from: The Desire Tree

Edited by: H. R. Ravi Kumar, Retd. Engineer, Shimoga.

Painting inspired by(copied from😛) https://youtu.be/Okl_0Los8SE

Pay Anything You Like

Rekha Om

Avatar of rekha om
$

Total Amount: $0.00