ಜೀವನ ಒಂದು ಚಲನಚಿತ್ರದಂತೆ. ಅದು ಒಳ್ಳೆಯದೋ, ಕೆಟ್ಟದ್ದೋ, ದೀರ್ಘಾವಾಗಿದೆಯೋ ಅಥವಾ ಚಿಕ್ಕದೋ, ಅದು ಸಿನಿಮಾ ಉದ್ಯಮದ ಅನುಸಾರ ಎನ್ನುವುದಕ್ಕಿಂತ, ವೈಯಕ್ತಿಕ ಆದ್ಯತೆ ಎನ್ನಬಹುದು. ಕೆಲವೊಂದು ದುರಂತ ಕಥೆಗಳಾದರೆ, ಮತ್ತೂ ಹಲವು ಹಾಸ್ಯ ವರ್ಗಕ್ಕೆ ಸೇರ್ಪಡೆಯಾಗುತ್ತದೆ. ಕೆಲವೊಂದು ಭಾವಾತಿರೇಕದ ನಾಟಕವಾದರೆ, ಕೆಲವು ಮಂದಗತಿಯ ನಾಟಕ, ಮತ್ತೊಂದಷ್ಟರಲ್ಲಿ ಎಷ್ಟೊಂದು ಘಟನೆಗಳು ತುಂಬಿಕೊಂಡಿರುತ್ತದೆ ಎಂದರೆ ನಾಟಕ ಎನ್ನುವುದು ಕಷ್ಟವಾಗಬಹುದು. ಹಾಗೆಯೇ, ಕೆಲವೊಂದು ಭಯಾನಕ, ಮತ್ತೂ ಕೆಲವು ಅಸಹನೀಯ. ಕೆಲವು ರೋಮಾಂಚಕ, ಇನ್ನೂ ಹಲವು ನೀರಸ. ಒಮ್ಮೆ ಚಲನಚಿತ್ರ ಮಂದಿರವನ್ನು ಹೊಕ್ಕಿದ ನಂತರ ನಿಮ್ಮ ಬಳಿ ಬೇರೆ ಆಯ್ಕೆ ಇರುವುದಿಲ್ಲ.

ಚಲನಚಿತ್ರ ಎಷ್ಟೇ ಅವಾಸ್ತವಿಕವೆನಿಸಿದರೂ, ನೀವು ಅದನ್ನು ಮಧ್ಯದಲ್ಲೇ ಬಿಟ್ಟು ಬರುವುದು ತುಂಬಾ ಅಪರೂಪ. ನೀವು ಅದಕ್ಕೆ ಹಣವನ್ನು ಕೊಟ್ಟಿರುವುದರಿಂದ ಪೂರ್ತಿ ಚಲನ ಚಿತ್ರವನ್ನು ನೋಡಿಯೇ ಬರುತ್ತೀರಿ. ಎಲ್ಲೋ ಕೆಲವೊಬ್ಬರು ಪ್ರಜ್ಞಾಪೂರ್ವಕವಾಗಿ ಅರ್ಧದಲ್ಲೇ ಎದ್ದು – ಸಿನಿಮಾಹತ್ಯೆಗಯ್ಯಬಹುದು. ಕೆಲವೊಮ್ಮೆ ಚಲನಚಿತ್ರವೇನೋ ಅದ್ಭುತವಾಗಿರುತ್ತದೆ, ಆದರೆ, ನಿಮ್ಮ ಹಿಂದೆ ಕುಳಿತಿರುವವನಿಗೆ, ಪ್ರತಿಯೊಂದು ದೃಶ್ಯದಲ್ಲೂ ತನ್ನ ಅಸ್ಥಿರ ಕಾಲಿನಿಂದ ನಿಮ್ಮ ಕುರ್ಚಿಯನ್ನು ಒದೆಯುತ್ತಾ ಏನಾದರೂ ಟೀಕೆ-ಟಿಪ್ಪಣಿ ಮಾಡಬೇಕು, ನಿಮ್ಮ ಪಕ್ಕದಲ್ಲಿ ಕುಳಿತಿರುವವನು, ದೇಶದ ಎಲ್ಲಾ ಪಾಪ್ ಕಾರ್ನ್ ಖಾಲಿ ಮಾಡುವ ಗುರಿ ಇಟ್ಟುಕೊಂಡಿರುವಂತಿದೆ, ಹಾಗೂ ಭಾರಿ ಶಬ್ದದಲ್ಲಿ ಅದನ್ನು ಮೆಲ್ಲುತ್ತಿದ್ದಾನೆ. ಇದೂ ಸಾಲದು ಎಂಬಂತೆ, ನಿಮ್ಮ ಮುಂದಿನ ಸಾಲಿನಲ್ಲಿ ಕುಳಿತಿರುವ ಸಭ್ಯ, ಅನಕೊಂಡ ಬುಸುಗುಟ್ಟುವಂತೆ, ತನ್ನ ಕೋಲಾ(ಪಾನೀಯ) ವನ್ನು ಹೀರುತ್ತಿದ್ದಾನೆ. ಮಂಜುಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಪ್ರತಿ ಹನಿ ಕೋಲಾವನ್ನು ಹೊರತೆಗೆಯಬೇಕೆಂಬ ಛಲದಿಂದ, ಕೋಲಾ ಗ್ಲಾಸನ್ನು ತನ್ನ ಶಕ್ತಿಯನ್ನೆಲ್ಲಾ ಬಿಟ್ಟು ಅಲ್ಲಾಡಿಸುತ್ತಿದ್ದಾನೆ. ನಿಮಗೆ ಅಸಹಾಯಕತೆಯೆನಿಸುತ್ತಿದೆ, ನಿರಾಶೆಯಾಗುತ್ತಿದೆ. ಇದನ್ನೆಲ್ಲಾ ನಿರ್ಲಕ್ಷಿಸಿ, ಚಲನಚಿತ್ರದತ್ತ ಗಮನಹರಿಸುವ ನಿಮ್ಮ ಪ್ರಯತ್ನ ಸಮಾಧಾನ ತರುತ್ತಿಲ್ಲ. ಜೀವನವೂ ಹೀಗೇ.

ಕೆಲವೊಂದು ಅಂಶಗಳು ನಿಮ್ಮ ನಿಯಂತ್ರಣದಲ್ಲಿದ್ದರೆ, ಮತ್ತು ಹಲವಾರು ನಿಮ್ಮ ಪರಿಧಿಯನ್ನು ಮೀರಿದ್ದು. ಕೆಲವೊಂದನ್ನು, ಇದೇ ವಾಸ್ತವಿಕತೆ ಎಂದುಕೊಂಡು ಜೀವಿಸುತ್ತೀರ, ಮತ್ತೂ ಕೆಲವೊಂದರ ಜೊತೆ ನಿರಂತರ ಹೋರಾಡುತ್ತೀರ. ಆದರೆ, ನಿಮ್ಮ ಹತ್ತಿರ ರಹಸ್ಯ ಒಂದನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಿಮ್ಮ ಚಲನಚಿತ್ರವನ್ನು ನೀವು ಯಾವಾಗ ಬೇಕಾದರೂ ಬದಲಾಯಿಸಬಹುದು, ಸಂಪೂರ್ಣ ನಿಮ್ಮ ಇಚ್ಛೆಯಂತೆ. ಚಲನಚಿತ್ರದಲ್ಲಿನ ಬದಲಾವಣೆ, ತಂತಾನೇ ನಿಮ್ಮ ಸುತ್ತಲಿನ ಪ್ರೇಕ್ಷಕರಲ್ಲೂ ಬದಲಾವಣೆ ತರುತ್ತದೆ.

ಉದಾಹರಣೆಗೆ ಹೇಳುವುದಾದರೆ, ನೀವು ನಿಮ್ಮ ಚಿಕ್ಕ ಮಕ್ಕಳನ್ನು ದೆವ್ವ-ಭೂತಗಳ ಚಲನಚಿತ್ರಗಳಿಗೆ ಕರೆದುಕೊಂಡು ಹೋಗುವುದಿಲ್ಲ. ಅದೇ ರೀತಿ, ಪ್ರೇಮಕಥೆಯ ಚಲನಚಿತ್ರದಲ್ಲಿ ಗಲಭೆ ಕೋರರ ಹಾವಳಿ ಇರುವುದು ಕಮ್ಮಿ. ಜೀವನವೆಂಬ ಚಲನಚಿತ್ರದಲ್ಲಿ ನಿಮ್ಮ ಚಿತ್ರಣವನ್ನು ಪರದೆಯ ಮೇಲೆ ನೀವೇ ವೀಕ್ಷಿಸಬಹುದು, ಹಾಗೂ, ನಿಸ್ಸಂಶಯವಾಗಿ ಅದು ನಿಮ್ಮದೇ ಆಯ್ಕೆ.

ನಿಮ್ಮ ಮನಸ್ಸು, ನಿಮ್ಮ ಯೋಚನೆಗಳ (ಸುರುಳಿ) ರೀಲ್ ಅನ್ನು ಚಿತ್ರಿಸುವ ಶಕ್ತಿಶಾಲಿ ಪ್ರೋಜೆಕ್ಟರ್, ಹಾಗೂ ಈ ಪ್ರೋಜೆಕ್ಟರ್ ಅನ್ನು ಚಾಲನೆ ಮಾಡುವುದು ನಿಮ್ಮ ಉಸಿರಿನಲ್ಲಿರುವ ಪ್ರಮುಖ ಜೀವ ಶಕ್ತಿ (ಪ್ರಾಣ). ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿದ್ದರೆ, ನಿಮ್ಮ ಅಭಿರುಚಿಗೆ ತಕ್ಕಂತೆ ರೀಲ್ ಅನ್ನು ಬದಲಿಸಬಹುದು. ಹಾಗೂ, ನಿಮ್ಮ ಉಸಿರಾಟ ನಿಮ್ಮ ನಿಯಂತ್ರಣದಲ್ಲಿದ್ದರೆ, ನೀವು ಬೇಕೆನಿಸಿದಾಗ ಬಿಡುವು ತೆಗೆದುಕೊಳ್ಳಬಹುದು, ಅಥವಾ ಪ್ರೊಜೆಕ್ಟರನ್ನು ಸ್ವಇಚ್ಛೆಯಿಂದ ನಿಲ್ಲಿಸಬಹುದು ಕೂಡ.

ನಾನು ನಿಮ್ಮ ಬಳಿ ಬಹುಮುಖ್ಯ ರಹಸ್ಯವನ್ನಷ್ಟೇ ಹಂಚಿಕೊಂಡಿಲ್ಲ, ಸಂಕ್ಷಿಪ್ತವಾಗಿ, ಬಹಳ ಸ್ಪಷ್ಟವಾಗಿ ಮುಖ್ಯವಾದ ಯೋಗ ರಹಸ್ಯವನ್ನೂ ಹಂಚಿಕೊಂಡಿದ್ದೇನೆ. ಹೋಗಿ ಆನಂದಿಸಿ! ಸಿನಿಮಾವನ್ನು ಸಂತೋಷದಿಂದ ವೀಕ್ಷಿಸಿ. ನಿಮ್ಮ ಇಷ್ಟದಂತೆ, ನೀವು ಇಷ್ಟ ಪಡುವ, ನಿಮಗೆ ಸಂತೋಷ ಕೊಡುವ, ಹಾಗೂ ಮನಸ್ಸಿಗೆ ಹುಮ್ಮಸ್ಸು ನೀಡುವ ಚಿತ್ರವನ್ನು ಆಡಿಸಿ. ನಿಮ್ಮದೇ ನಿಯಮಗಳು, ನಿಮ್ಮ ಆದ್ಯತೆಯ ಸೆಟ್ಟಿಂಗ್, ನಿಮ್ಮ ಖಾಸಗಿ ಕೋಣೆಯಲ್ಲಿಯೇ ವೀಕ್ಷಿಸಿ. ನನ್ನ ಹಾಗೆ!

ನನ್ನ ಜೊತೆಗೂಡಿ ವೀಕ್ಷಿಸಲು ಇಚ್ಛಿಸುವಿರಾ, ಯಾರಾದರೂ?

ಶಾಂತಿ. 

ಸ್ವಾಮಿ

Translated from: Life Is…Like a Movie 

Edited by: H. R. Ravi Kumar, Retd. Engineer, Shimog

Painting inspired by https://i.pinimg.com/originals/bf/85/f8/bf85f887458d24b4c74ad62d3dbd8b9b.jpg

 

Pay Anything You Like

Rekha Om

Avatar of rekha om
$

Total Amount: $0.00