ಜೀವನವು ನಾಲ್ಕು ಋತು ಚಕ್ರವಿದ್ದಂತೆ. ಯಾರ ಆದ್ಯತೆಯನ್ನೂ ಗಣನೆಗೆ ತೆಗೆದುಕೊಳ್ಳದೆ, ಪ್ರತಿಯೊಂದು ಋತು ತನ್ನ ಸಮಯದ ನಂತರ ಮುಂದಿನ ಋತುವಿಗೆ ದಾರಿ ಮಾಡಿಕೊಡುತ್ತದೆ. ಅದೇ ರೀತಿ ಮನುಷ್ಯನ ಯೋಚನೆಗಳೂ ಸಹ, ಒಂದು ಅಂತ್ಯ ಆಗುವುದರೊಳಗೆ ಮತ್ತೊಂದು ಹೊರಹೊಮ್ಮುತ್ತದೆ. ಚಳಿಗಾಲದಲ್ಲಿ ಪ್ರಕೃತಿ ಮುದುಡುತ್ತದೆ; ಶರತ್ಕಾಲದಲ್ಲಿ ಉದುರುತ್ತದೆ, ಬೇಸಿಗೆಯಲ್ಲಿ ವಿಸ್ತರಿಸುತ್ತದೆ ಹಾಗೂ ವಸಂತದಲ್ಲಿ ಅರಳುತ್ತದೆ.

ನಮಗೆ ಹಿಡಿಸದ ಋತು ಮುಗಿಯುತ್ತಲೇ ಇಲ್ಲ ಎಂದೆನಿಸುತ್ತದೆ. ವಸಂತಕಾಲದಲ್ಲಿ ಪುಷ್ಪಗಳು ಅರಳುತ್ತವೆ ಹಾಗೂ ಮಳೆಗಾಲದಲ್ಲಿ ಮಳೆಯಾಗುತ್ತದೆ, ಚಳಿಗಾಲದಲ್ಲಿ ಉಷ್ಣಾಂಶ ಇಳಿಮುಖವಾಗುತ್ತದೆ ಹಾಗೂ ಬೇಸಿಗೆಯಲ್ಲಿ ಪಾದರಸದ ಏರಿಕೆಯಾಗುತ್ತದೆ – ನಮ್ಮ ಉಸಿರಾಟದಲ್ಲಿರುವ ಪ್ರಾಣದ ಸ್ಥಿತಿಯು ನಮ್ಮ ಪ್ರಜ್ಞೆಯ ಮೇಲೆ ಪರಿಣಾಮ ಬೀರುವ ಹಾಗೆ. ಇದೆಲ್ಲಾ ಒಂದು ನಿರ್ದಿಷ್ಟ ವ್ಯವಸ್ಥೆಯಂತೆ, ಮಾಡು ಇಲ್ಲ ಮಡಿ.

ಅದೇ ರೀತಿ, ನಾವೆಲ್ಲಾ ಜೀವನದ ಹಲವಾರು ಬಣ್ಣಗಳನ್ನು ಅನುಭವಿಸುತ್ತೇವೆ. ವರ್ಷದ ಯಾವ ಕಾಲದಲ್ಲಿ ನೀವು ಜನಿಸಿರುವಿರಿ, ಅದರ ಆಧಾರಿತ, ಶರತ್ಕಾಲಕ್ಕೆ ಮುನ್ನ ವಸಂತವನ್ನು ಅನುಭವಿಸುವಿರಿ ಅಥವಾ ವಸಂತ ಮೊದಲು, ತದನಂತರ ಶರತ್ಕಾಲ. ಹಾಗೂ ನೀವು ಯಾವ ಪ್ರದೇಶದಲ್ಲಿ ಹುಟ್ಟಿರುವಿರಿ ಅದರಂತೆ, ವರ್ಷಪೂರ್ತಿ ನವಿರಾದ ಬಿಸಿಲಿನ ಆಹ್ಲಾದತೆಯನ್ನು ಅನುಭವಿಸಬಹುದು ಅಥವಾ ತೀಕ್ಷ್ಣವಾದ ಚಳಿಯನ್ನು. ನೀವು ಹವಾಮಾನದ ಪರಿಸ್ಥಿತಿಯನ್ನು ನಿಭಾಯಿಸುವುದನ್ನು ಕಲಿತುಕೊಳ್ಳುವಿರಿ. ಚಳಿಗಾಲದಲ್ಲಿ ಪದರಗಳನ್ನು ಹೇರಿಕೊಳ್ಳುವಿರಿ ಹಾಗೂ ಅದರ ವಿರುದ್ಧವಾಗಿರುತ್ತದೆ ಬೇಸಿಗೆ. ಮಳೆಗಾಲದಲ್ಲಿ ಛತ್ರಿ ಹಿಡಿದು ಓಡಾಡುವಿರಿ. 

ಹಾಗೆ ನೋಡಿದರೆ, ನಮ್ಮಲ್ಲಿರುವ ಯಾವುದೋ ಒಂದರಿಂದ ಬಿಡುಗಡೆ ಹೊಂದುವ ಪ್ರಯತ್ನದಲ್ಲಿ ನಾವು ಸದಾ ಇರುತ್ತೇವೆ. ಯಾವುದಾದರೊಂದರಿಂದ ನಮ್ಮನ್ನು ರಕ್ಷಿಸಿಕೊಳ್ಳುವ ನಿರಂತರ ಪ್ರಯತ್ನದಲ್ಲಿರುತ್ತೇವೆ. ಪ್ರಕೃತಿಯ ಸಹಭಾಗಿತ್ವದಲ್ಲಿ ಇರುವುದೆಂದರೆ ಅದು ನೀಡುತ್ತಿರುವ ಪ್ರತಿಯೊಂದನ್ನೂ ಅನುಭವಿಸುವುದು ಮತ್ತು ಆನಂದಿಸುವುದು ಎಂದರ್ಥ. ನೀವು ಮಳೆಗಾಲಕ್ಕಾಗಿ ಸಂಗ್ರಹಿಸಬೇಕು ನಿಜ, ಇದರರ್ಥ ನೀವು ಅಳಿಲಿನಂತಾಗಿ ಎಂದೆಲ್ಲ. ಹೋಗಿ, ಕೆಲವೊಮ್ಮೆ ಮಳೆಯಲ್ಲಿ ನೆನೆಯಿರಿ – ಅದು ಅನುಗ್ರಹದ ಹನಿಗಳಾಗಿರಬಹುದು. ಚಳಿಯನ್ನು ಅನುಭವಿಸಿರಿ – ಅದು ನಿಮ್ಮನ್ನು ಇನ್ನಷ್ಟು ಸದೃಢವಾಗಿಸಬಹುದು.

ಬೆಚ್ಚಗಿನ ಜೀವನದಲ್ಲಿ ಪ್ರತಿಕೂಲತೆಗಳ ಬಿಸಿಯು, ಸಹಿಸಲಾರದ ಸುಡುವ ಬೆಂಕಿಯಾದಾಗ, ನೀವು ತಂಪಾದ ಜಾಗಕ್ಕೆ ಹೋಗಲು ಯೋಚಿಸುತ್ತೀರಿ. ಶರತ್ಕಾಲದ ಕೊನೆಯಲ್ಲಿ ಕಾಣುವ, ಎಲೆಗಳೆಲ್ಲಾ ಉದುರಿ ಬೋಳಾದ ಮರದಂತೆ ಜೀವನ ತೋರುತ್ತಿರುವಾಗ, ಸ್ವಲ್ಪ ಸಂಯಮವಿರಲಿ. ವಸಂತ ಋತುವಿನ ಚಿತ್ರಗಳನ್ನು ವೀಕ್ಷಿಸುತ್ತ ಮುಂದಿನದನ್ನು ನಿರೀಕ್ಷಿಸಿ, ಅಥವಾ ಎಲೆಗಳು ಉದುರದ ಯಾವುದಾದರೂ ಜಾಗಕ್ಕೆ ಹೋಗಿ.

ಬದಲಾವಣೆ ಎಂಬುದು ಎಂದಿಗೂ ನಿರಂತರ; ಅದು ಸಣ್ಣದಾದ, ಅಳೆಯಲಾಗದ ಪ್ರಮಾಣದಲ್ಲಿ ಆಗುತ್ತದೆ. ಒಂದು ಭಾರೀ ಮಳೆ ಕೂಡ ಚಿಕ್ಕ ಚಿಕ್ಕ ಹನಿಗಳಿಂದಲೇ ಆಗಿರುವುದು. ಆದರೆ ಅದು ಅಪೇಕ್ಷಿತ ಬದಲಾವಣೆಯಲ್ಲದಿರಬಹುದು. ನಿಮಗೆ ಅಪೇಕ್ಷಿತ ಬದಲಾವಣೆ ಬೇಕೆಂದರೆ, ನೀವು ಅದಕ್ಕೆ ತಕ್ಕಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ವಾಸ್ತವವಾಗಿ, ನೀವೇ ಆ ಬದಲಾವಣೆಯಾಗಬೇಕು. ತೀವ್ರವಾದ ನಿರ್ಧಾರಗಳಿಂದ ಬದಲಾವಣೆಯೂ ತೀವ್ರವಾಗಿರುತ್ತದೆ, ಹಾಗೂ ಮಿತವಾದದ್ದು ಸುರಕ್ಷಿತವಾಗಿರುತ್ತದೆ. 

ಅಥವಾ, ಇನ್ನೊಂದು ಆಯ್ಕೆಯೆಂದರೆ, ಒಳಮುಖವಾಗಿ ತಿರುಗುವುದು, ಹಾಗೂ ಹೊರಗಿನ ವಿದ್ಯಾಮಾನಗಳನ್ನೆಲ್ಲಾ ದೇಹದ ಅಲ್ಪ ಬಾಳಿಕೆಯ ಅನುಭವಗಳು ಎಂದು ಅರಿತುಕೊಳ್ಳುವುದು. ನಂತರ ಹನಿಹನಿಯಾಗಿ ಬೀಳುತ್ತಿದ್ದ ಆನಂದ, ಈಗ ಮಹಾದಾನಂದದ ಸಮುದ್ರದಂತೆ ಕಾಣುತ್ತದೆ.

ಅಂತರಂಗದಲ್ಲಿ ನೀವು ಸುರಕ್ಷಿತವಾಗಿ, ಸಂತೋಷವಾಗಿ ಹಾಗೂ ಆನಂದದಿಂದಿರುವಿರಿ – ಉಷ್ಣ ಹಾಗೂ ಶೀತದಿಂದ ಸಂಪೂರ್ಣ ರಕ್ಷಣೆಯಿಂದ. ನೀವು ಶರತ್ಕಾಲದ ಸುಂದರ ಬಣ್ಣಗಳನ್ನು ನೋಡುತ್ತೀರಾದರೂ, ಅಂತರಂಗದಲ್ಲಿ ಯಾವಾಗಲೂ ವಸಂತ ಋತು, ಆನಂದದ ಬಿರುಗಾಳಿಯ ಮಧುರವಾದ ಸ್ವರಕ್ಕೆ ನರ್ತಿಸುವ ಲೆಕ್ಕವಿಲ್ಲದಷ್ಟು ಸುಂದರ ಹೂವುಗಳನ್ನು ಕಾಣುವಿರಿ (ಅನಾಹತ ನಾದ); ಲೇಸಾದ ತಾಪಮಾನ. ಒಳಗೆ ಮಂಜು ಮುಸುಕಿದ ವಾತಾವರಣವಿಲ್ಲ; ಕೊರೆಯುವ ಚಳಿಯಿಲ್ಲ – ಕೇವಲ ಅವರ್ಣನೀಯ ಸೌಂದರ್ಯ.

ಹೋಗಿ, ವಿಹರಿಸಿ! ನಿಮ್ಮೊಳಗಿನ ಶಾಂತ ಆನಂದಸಾಗರದ ತೀರಕ್ಕೆ ಪಯಣಿಸಿ. ನೀವು ಹೋಗುವುದಕ್ಕೆ ನಾನು ಸಹಾಯ ಮಾಡಬಲ್ಲೆ. ನನಗೆ ಭರವಸೆ ಇದೆ, ಒಮ್ಮೆ ಅಲ್ಲಿ ಹೋದ ನಂತರ ಹಿಂದಿರುಗುವುದಕ್ಕೆ ನಿಮಗೆ ಯಾವುದೇ ರೀತಿಯ ಆಸಕ್ತಿ ಇರುವುದಿಲ್ಲ.

 ಶಾಂತಿ,

ಸ್ವಾಮಿ

 

Translated from: Life is Like…The Four Seasons

Edited by: H. R. Ravi Kumar, Retd. Engineer, Shimoga.

Painting inspired by(copied from😛) https://m.facebook.com/watch/?v=691511704814300&_rdr

 

Pay Anything You Like

Rekha Om

Avatar of rekha om
$

Total Amount: $0.00