ಅಸಂಖ್ಯ ಜನರ ಜೊತೆಗಿನ ನನ್ನ ಸಂಭಾಷಣೆಯಲ್ಲಿ, ಗೃಹಸ್ಥನಿಗೆ ಆತ್ಮಸಾಕ್ಷಾತ್ಕಾರಕ್ಕೆ ಆರಂಭದ ಹಂತ ಮತ್ತು ಸಾಧ್ಯತೆಗಳೇನು ಎಂದು ಬಹಳಷ್ಟು ಮಂದಿ ಕೇಳಿದ್ದಾರೆ. ಓದುಗರೊಬ್ಬರು ಕೆಳಗಿನ ಪ್ರಶ್ನೆಯನ್ನು ಕೇಳಿದ್ದಾರೆ. ಇದರ ಉತ್ತರದಿಂದ ಇತರರಿಗೂ ಸಹಾಯವಾಗಲಿ ಎಂದು ಇದನ್ನು ದಾಖಲಿಸುತ್ತಿದ್ದೇನೆ.

ಪ್ರಶ್ನೆ ಹೀಗಿದೆ:
ಪ್ರಣಾಮಗಳು ಪ್ರಭುಗಳೇ. ದಿನನಿತ್ಯದ ಸವಾಲುಗಳನ್ನು ಎದುರಿಸುತ್ತಿರುವ ನಮ್ಮಂತಹ ದುರ್ಬಲ ಮನಸ್ಸಿನವರಿಗೆ ಮಾರ್ಗದರ್ಶನ ನೀಡಲು ನೀವು ಹಿಂದಿರುಗಿರುವುದು ನಮಗೆ ತುಂಬಾ ಸಂತೋಷ. ಸ್ವಾಮೀಜಿ, ಆನಂದ ಅಥವಾ ಶುದ್ಧ ಮನಃಸ್ಥಿತಿ ಹೊಂದಲು ಪೂರ್ವಾಗತ್ಯಗಳೇನು? ಪ್ರಾರಂಭಿಸುವುದು ಎಲ್ಲಿಂದ? ಪ್ರಾಪಂಚಿಕ ಬದ್ಧತೆ ಹಾಗೂ ಜವಾಬ್ದಾರಿ ಉಳ್ಳವರು, ಪಥದಲ್ಲಿ ಕೇಂದ್ರೀಕೃತವಾಗಿ ಹಾಗೂ ಬದ್ಧರಾಗಿರುವುದು ಹೇಗೆ?  ನಮ್ಮ ಇಷ್ಟೊಂದು ಅಶುದ್ಧ ಜೀವನದಲ್ಲಿ, ಇದು ಸಾಧ್ಯವಾಗುವುದು ಹೇಗೆ? ಜೈ ಮಾತಾ ದಿ.

ಪೂರ್ವಾಗತ್ಯಗಳು:
ನಿಮ್ಮ ಸತ್ಯವನ್ನು ಅರಿಯಲು ತೀವ್ರವಾದ ಹಂಬಲ, ಹಾಗೂ ನೀವು ಆಯ್ಕೆ ಮಾಡಿಕೊಂಡಿರುವ ಪಥದಲ್ಲಿ ಅಚಲವಾಗಿ ಬದ್ಧರಾಗಿರುವುದೇ ಪೂರ್ವಾಗತ್ಯಗಳು. ದಯವಿಟ್ಟು ಮತ್ತೊಮ್ಮೆ ‘ಪ್ರಕೃತಿ ಮತ್ತು ನೀವು‘  ಓದಿ, ಮುಖ್ಯವಾಗಿ ಹತ್ತು ಅಂಶಗಳನ್ನು ಪಟ್ಟಿ ಮಾಡಿರುವ ಕೊನೆಯ ಭಾಗವನ್ನು.

ಮೊದಲ ಹಂತ:
 ಪ್ರತಿದಿನದ ಧ್ಯಾನದ ಅಭ್ಯಾಸಕ್ಕೆ ಬದ್ಧರಾಗಿ. ನೀವು ಧ್ಯಾನದ ಪಥದಲ್ಲಿದ್ದರೆ, ದಿನಕ್ಕೆರಡು ಬಾರಿಯಾದರೂ ಸಹ.

ನಿಮ್ಮ ಇಷ್ಟ ದೇವರ ದರ್ಶನ ಮಾಡಲು ಬಯಸಿದರೆ, ನೀವು ಮೊದಲು ನಿಮ್ಮ ಸಂಬಂಧವನ್ನು ಅಭಿವೃದ್ಧಿಗೊಳಿಸಿಕೊಳ್ಳಬೇಕು. ನಿಮ್ಮ ಇಷ್ಟ ದೇವರ ಪವಿತ್ರ ನಾಮಜಪ ಮಾಡುವಾಗ ಕಣ್ಣೀರು ಸುರಿಸಿ.   ಬಾಲಿಶವೆನಿಸದಿದ್ದರೂ, ಅಸಮಂಜಸ ಎಂದು ಅನಿಸುತ್ತಿದೆಯೇ? ಫಲಿತಾಂಶ ಬೇಕಿದ್ದರೆ ಪ್ರಯತ್ನಿಸಿ ನೋಡಿ. ನಿಮ್ಮ ಪ್ರತಿಯೊಂದು ಕಾರ್ಯವನ್ನು ನಿಮ್ಮ ಇಷ್ಟ ದೇವರಿಗೆ ಸಮರ್ಪಿಸಿ. ತಿನ್ನುವುದು, ಉಸಿರಾಡುವುದು, ಜೀವನ, ನಿದ್ರೆ ಎಲ್ಲವನ್ನೂ ನಿಮ್ಮ ವೈಯಕ್ತಿಕ ಭಗವಂತನಿಗೆ ಅರ್ಪಿಸಿ. ಇದು ನಿಧಾನ ಹಾಗೂ ಸ್ಥಿಮಿತವಾದ ಪಥ, ಆದರೆ ಶೀಘ್ರವಾಗಿ ನಿಮ್ಮನ್ನು ಪರಿಶುದ್ಧಗೊಳಿಸುತ್ತದೆ.

ಬದ್ಧತೆ:
 ಇದು ಆದ್ಯತೆಯ ಪ್ರಶ್ನೆ. ನಿಮ್ಮ ದಿನದ ಅವಧಿಯಲ್ಲಿ ಒಂದು ಗಂಟೆಯನ್ನು ನನಗೆ ಕೊಡಬಹುದಾ? ಇಲ್ಲದಿದ್ದರೆ, ಉದಾಹರಣೆಗೆ, ವಾಹನ ಚಲಾಯಿಸುವಾಗ, ಅಥವಾ ಸ್ನಾನ ಮಾಡುವಾಗ ನಾನು ಹೇಳುವುದನ್ನು ಯೋಚಿಸಬಹುದಾ? ಇಲ್ಲದಿದ್ದರೆ, ನೀವು ದೂರದರ್ಶನ ನೋಡುವುದನ್ನು ಅಥವಾ ದಿನಪತ್ರಿಕೆ ಓದುವುದನ್ನು ಬಿಟ್ಟು ಆ ಸಮಯವನ್ನು ಪಥಕ್ಕೆ ಮೀಸಲಾಗಿಡಬಹುದಾ? ಇಲ್ಲದಿದ್ದರೆ, ಹೇಗೆ ಧ್ಯಾನ ಶಿಬಿರಗಳಲ್ಲಿ ಇರುತ್ತದೆಯೋ ಹಾಗೆ, ವರ್ಷದಲ್ಲಿ ಕೆಲವು ದಿನಗಳನ್ನು ಪ್ರತ್ಯೇಕವಾಗಿ ಸಾಧನೆಗೆ ಮೀಸಲಾಗಿಡಬಹುದೇ?

ನಿಮಗೆ ನೇರ ಮೇಲ್ವಿಚಾರಣೆ ಹಾಗೂ ಮಾರ್ಗದರ್ಶನವನ್ನು 
ನಾನು ಸಂತೋಷದಿಂದ ನೀಡಬಲ್ಲೆ. ಅಥವಾ, ನೀವು ಪ್ರತಿಯೊಂದು ಸಂದರ್ಭದಲ್ಲೂ ಸಹಾನುಭೂತಿ ಹಾಗೂ ಅಹಿಂಸೆಯನ್ನು ಪಾಲಿಸುತ್ತೀರಾ, ಪ್ರತಿಯೊಂದು ಸಂದರ್ಭದಲ್ಲೂ ಸತ್ಯವಚನವನ್ನೇ ಪಾಲಿಸುತ್ತೀರಾ? ಇಲ್ಲದಿದ್ದರೆ, ನಿಮಗೆ ನೀಡಲಾದ ಪ್ರತಿಯೊಂದು ಭಾವನೆಗೆ ಪ್ರತಿಯಾಗಿ ಪ್ರೀತಿಯನ್ನು ಹಿಂದಿರುಗಿಸಬಹುದೇ? ಈ ಮೇಲಿನದ್ದನ್ನೆಲ್ಲಾ ಅನುಸರಿಸಿದರೆ ನೀವು ಯಾವ ಹಂತ ತಲುಪಬಹುದು ಎಂದು ನೀವೇ ಕಲ್ಪಿಸಿಕೊಳ್ಳಿ.

ಪ್ರಾರಂಭದಲ್ಲಿ ತೀವ್ರವಾದ ಸಾಧನೆಯನ್ನು ಅನುಸರಿಸಿದರೆ ಶುದ್ಧ ಚೈತನ್ಯದ ಹರಿವು ಸ್ವಯಂಪ್ರೇರಿತವಾಗಿ ಅಗತ್ಯವಾದ ಬದಲಾವಣೆಗಳನ್ನು ತರುತ್ತದೆ.

ನೀವು ಪಥದಲ್ಲಿ ನಿಧಾನವಾಗಿ, ಸ್ಥಿರವಾಗಿ ಹಾಗೂ ನಿಖರವಾಗಿ ಮುನ್ನಡೆಯುತ್ತಿದ್ದಂತೆ, ಸಾಧನೆಯನ್ನು ತೀವ್ರಗೊಳಿಸುವ ಹಂಬಲ ತಂತಾನೇ ಬರುತ್ತದೆ. ಹಾಗಾಗಿ, ನಿಮ್ಮ ಗುರಿಯನ್ನು ಇವೆರಡರಿಂದಲೂ ತಲುಪಬಹುದು. ನಿರಂತರ ಆನಂದದ ಸ್ಥಿತಿಯನ್ನು ತಲುಪಲು, ಒಂದು ಹಂತದಲ್ಲಿ ಸಂಪೂರ್ಣವಾಗಿ ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸಮಯ ಕೊಡಲಾಗುತ್ತದೆಯೋ ಇಲ್ಲವೋ ಎಂಬ ವಿಷಯವನ್ನು ಯೋಚಿಸದಿರಿ; ಆರಂಭಿಸುವುದು ಹೆಚ್ಚು ಮುಖ್ಯ 

ನಾನು ಈ ಮೊದಲೇ ಹೇಳಿರುವ ಅಂಶಗಳಲ್ಲಿ ಒಂದನ್ನು, ಕೆಲವನ್ನು, ಅಥವಾ ಎಲ್ಲವನ್ನೂ ಅನುಸರಿಸಿ. ನನ್ನ ದೃಷ್ಟಿಯಿಂದ, ನಾನು ಸಮಗ್ರ ವಿಧಾನವನ್ನು ಕೊಡಲಿಚ್ಛಿಸುತ್ತೇನೆ – ಸ್ವಯಂ ಪರಿವರ್ತನೆಯ ವಿಧಾನ. ತುಣುಕು ಪರಿಚಯದಿಂದ ಯಾವುದೇ ಉಪಯೋಗವಿಲ್ಲ. ಹಾಗೂ, ಸಂಪೂರ್ಣ ವಿಧಾನವನ್ನು ದಾಖಲಿಸುವುದಕ್ಕೆ ನನಗೆ ಸ್ವಲ್ಪ ಸಮಯ ಬೇಕು.

ಕಲ್ಮಶಗಳಿಂದ ಮುಕ್ತಿ: 
ಒಂದು ಲೋಟದ ತುಂಬಾ ಉಪ್ಪು ನೀರನ್ನು ಕಲ್ಪಿಸಿಕೊಳ್ಳಿ. ನಿಮ್ಮ ಗುರಿ, ಉಪ್ಪನ್ನು ನೀರಿನಿಂದ ಸಂಪೂರ್ಣ ತೆಗೆಯುವುದು. ಇದಕ್ಕೆ ಬಟ್ಟಿ ಇಳಿಸುವಿಕೆಯಂತಹ ಹಲವಾರು ವಿಧಾನಗಳಿವೆ. ಯಾವುದನ್ನು ಆಯ್ಕೆ ಮಾಡಿದರೂ ಫಲಿತಾಂಶ ಒಂದೇ. ಆದರೂ ಕೂಡ, ಇದಕ್ಕೆಲ್ಲಾ ಕೆಲವು ಉಪಕರಣಗಳು ಹಾಗೂ ಸಾಮಗ್ರಿಗಳ ಅಗತ್ಯವಿದೆ. ಅತೀ ಸುಲಭದ ವಿಧಾನವೆಂದರೆ ಸಿಹಿನೀರನ್ನು ಲೋಟಕ್ಕೆ ಸುರಿಯುತ್ತಾ ಬರುವುದು. ಶೀಘ್ರದಲ್ಲೇ, ನೀರು ತುಂಬಿ ಹರಿಯಲು ಶುರುವಾಗುತ್ತದೆ. ಸಿಹಿನೀರನ್ನು ಸುರಿಯುತ್ತಾ ಬಂದಂತೆ, ಅಂತಿಮವಾಗಿ ಕಲ್ಮಶದ ಕುರುಹು ಕೂಡ ಉಳಿಯದಂತೆ ಲೋಟದ ತುಂಬಾ ಸಿಹಿ ನೀರು ಭರ್ತಿಯಾಗುತ್ತದೆ.

ಇದೇ ತರ ನಿಮ್ಮ ಮನಃಸ್ಥಿತಿ ಕೂಡ. ಧ್ಯಾನದ ವಿಧಾನಕ್ಕೆ ತೊಡಗಿಸಿಕೊಳ್ಳಲು ಆಗದಿದ್ದರೆ (ಉಪಕರಣಗಳ ಅಗತ್ಯವಿರುವ ವಿಧಾನಕ್ಕೆ ಹೋಲಿಸಬಹುದು), ನೀವು ಸದಾಚಾರದ ಭಕ್ತಿಭಾವವನ್ನು ಸುರಿಯಲು ಆರಂಭಿಸಿ. ಕಲ್ಮಶವೆಲ್ಲಾ ದೇಹದಿಂದ ಹೊರ ಹರಿದು, ನೀವು ಶುದ್ಧ ಹಾಗೂ ಕಳಂಕರಹಿತರಾಗುವಿರಿ

ನಮ್ಮ ಗತಕಾಲವನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗಾಗಿ, ಒಂದು ದೃಢ ನಿಶ್ಚಯದಿಂದ, ಸ್ವಚ್ಛವಾದ ಹಾಳೆಯಿಂದ ಆರಂಭಿಸಿ, ಹಾಗೂ ನಿಮ್ಮ ಬಗ್ಗೆ ಅತಿಯಾಗಿ ಕಠಿಣರಾಗಬೇಡಿ. ಗತಕಾಲದಲ್ಲಿ ಏನೆಲ್ಲಾ ಆಗಿದ್ದರೂ ಸಹ, ಸ್ವ-ಶುದ್ಧೀಕರಣದಿಂದ, ಸ್ವ-ಪರಿವರ್ತನೆಯಾಗಬಹುದು. ಯಾವ ಅಪರಾಧವೂ ಮಾಡದ ಸಂತ ಇರಬಹುದೇ ಎಂದು ನನಗೆ ಅನುಮಾನ. ಮತ್ತು ಇದ್ದರೂ ಕೂಡ, ದುಷ್ಕರ್ಮಿಯು ಋಷಿಯಾಗಿ ಪರಿವರ್ತನೆಯಾಗಿರುವ ಜೀವನ ಚರಿತ್ರೆಗಳೂ ಉಂಟು.

ಒಬ್ಬ ಸಂತ ಹಾಗೂ ದುಷ್ಕರ್ಮಿಯಲ್ಲಿರುವ ಪ್ರಮುಖ ವ್ಯತ್ಯಾಸವೆಂದರೆ, ಮೊದಲನೆಯವನು ನೈತಿಕತೆಯನ್ನು ಅಭ್ಯಾಸ ಮಾಡುವ ಸಾಮರ್ಥ್ಯ ಹೊಂದಿದ್ದಾನೆ ಹಾಗೂ ಎಲ್ಲಾ ಭಾವನೆಗಳಿಗೂ ಪ್ರೀತಿಯಿಂದ ಹಾಗೂ ಕೇವಲ ಪ್ರೀತಿಯಿಂದ ಪ್ರತಿಕ್ರಿಯೆ ನೀಡುತ್ತಾನೆ. ದುಷ್ಕರ್ಮಿ ಕೇವಲ ಪ್ರತಿಕ್ರಿಯಿಸುತ್ತಾನೆ, ಸಂತ, ಸ್ವ-ಇಚ್ಛೆಯಿಂದ, ಯಾವುದೇ ನಿರ್ಬಂಧವಿಲ್ಲದೆ ಕಾರ್ಯ ಮಾಡುತ್ತಾನೆ. ನಿಮ್ಮನ್ನು ಬಿಟ್ಟು, ಯಾರೂ ಸಹ ನೀವು ಸಹಾನುಭೂತಿಯಿಂದ ನಡೆದುಕೊಳ್ಳುವುದನ್ನು ತಡೆಯಲಾರರು. ನೀವು ಕಾರ್ಯ ಮಾಡುವುದರಲ್ಲಿ ಬದಲಾವಣೆ ತರದಿದ್ದರೆ, ಪ್ರಕೃತಿ ನಿಮಗೆ ನೀಡುವುದರಲ್ಲಿ ಹೇಗೆ ಬದಲಾವಣೆ ಮಾಡುತ್ತದೆ? ಎಷ್ಟೆಂದರೂ, ಬಿತ್ತಿದಂತೆ ಬೆಳೆ!

ಶಾಂತಿ, 
ಸ್ವಾಮಿ.

Translated from: The First Step in Meditation

Edited by: H. R. Ravi Kumar, Retd. Engineer, Shimoga.

Painting inspired by(copied from😛) https://youtu.be/cg2vYPvMAC0

Pay Anything You Like

Rekha MG

Avatar of rekha mg
$

Total Amount: $0.00