ಪರಿಶುದ್ಧ ಭಕ್ತಿಗೆ ಮೆಚ್ಚಿ, ಭಗವಂತ ಪ್ರಕಟವಾಗಿರುವುದಕ್ಕೆ ಸಾಕ್ಷೀಭೂತವಾಗಿರುವ, ಒಬ್ಬ ಭಕ್ತನ ಹೃದಯಸ್ಪರ್ಶಿ ಕಥೆ ಇಲ್ಲಿದೆ. 

ಸುಮಾರು 600 ವರ್ಷಗಳ ಹಿಂದೆ, ಭಾರತದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದ್ದ ಸಮಯದಲ್ಲಿ, ಧನ್ನ ಜಾಟ್ ಹೆಸರಿನ ಭಕ್ತನೋರ್ವ ಜೀವಿಸುತ್ತಿದ್ದ.

ಅನಕ್ಷರಸ್ಥ, ನಿಷ್ಠಾವಂತ ಹಾಗೂ ಶ್ರಮಜೀವಿ ಧನ್ನ, ಒಬ್ಬ ಬ್ರಾಹ್ಮಣನ ಮನೆಯಲ್ಲಿ ಸೇವಕನಾಗಿದ್ದ. ಬಹಳ ಸಂಭಾವಿತನಾಗಿ ಪರಿಗಣಿಸಲ್ಪಡುವ ಅವನ ಮಾಲೀಕ, ವೇದ ಪಠಣ ಪಾರಂಗತ, ಹಾಗೂ ಧಾರ್ಮಿಕ ಕಾರ್ಯಗಳನ್ನು ನಿರ್ವಹಿಸುವ ಅರ್ಚಕನಾಗಿದ್ದ. ಅವನೊಬ್ಬ ವೈಷ್ಣವ ಬ್ರಾಹ್ಮಣ ಹಾಗೂ ಕೃಷ್ಣನ ಉತ್ಕಟ ಭಕ್ತನಾಗಿದ್ದ. ತನ್ನ ದಿನನಿತ್ಯದ ಧರ್ಮಾಚರಣೆಗಳನ್ನು ತುಂಬಾ ಶ್ರದ್ಧೆಯಿಂದ ಆಚರಿಸುತ್ತಿದ್ದ. ಸಾಲಿಗ್ರಾಮ ಶಿಲೆಯಲ್ಲಿ (ಗಂಡಕಿ ನದಿಯಲ್ಲಿ ದೊರೆಯುವ ಒಂದು ರೀತಿಯ ಕಲ್ಲು) ಅವನು ಕೃಷ್ಣನನ್ನು ಪೂಜಿಸುತ್ತಿದ್ದ. ಅನಾದಿಕಾಲದಿಂದಲೂ ವೈಷ್ಣವರು ಸಾಲಿಗ್ರಾಮ ಶಿಲೆಯನ್ನು ಪೂಜಿಸುತ್ತಾ ಬಂದಿದ್ದಾರೆ.

ಧನ್ನನಿಗೆ ಆ ಸಾಲಿಗ್ರಾಮದತ್ತ ಏನೋ ಒಂದು ಸಹಜ ಆಕರ್ಷಣೆ, ಹಾಗೂ ಕೃಷ್ಣನನ್ನು ಆ ಕಲ್ಲಿನ ಗುಡಿಯ ಮೂಲಕ ಪೂಜಿಸಬೇಕೆಂಬ ಹಂಬಲ. ಸಾಲಿಗ್ರಾಮ ಶಿಲೆ ಹಾಗೂ ಅದರ ಪೂಜಾವಿಧಿ ವಿಧಾನದ ಬಗ್ಗೆ ಬ್ರಾಹ್ಮಣನಲ್ಲಿ ಆಗಾಗ್ಗೆ ವಿನಂತಿಸಿಕೊಳ್ಳುತ್ತಿದ್ದ. ಆದರೆ ಧನ್ನನನ್ನು ಬ್ರಾಹ್ಮಣ ಒಬ್ಬ ಮೂಢನೆಂದೇ ಪರಿಗಣಿಸಿದ್ದ. ಧನ್ನ ಈ ವಿಷಯವನ್ನು ಪ್ರಸ್ತಾಪಿಸಿದಾಗಲೆಲ್ಲಾ, ಅದಕ್ಕೆ ನೀನು ಅಯೋಗ್ಯ ಹಾಗೂ ಅನರ್ಹನೆಂದು ಅವನ ಮಾಲೀಕ ಹೇಳುತ್ತಿದ್ದ. ಮತ್ತು ಹೇಳುತ್ತಿದ್ದ, ಭಗವಂತನನ್ನು ಪೂಜಿಸಲು ತುಂಬಾ ವಿಸ್ತಾರವಾದ ವಿಧಾನಗಳು ಹಾಗೂ ಪದ್ಧತಿಗಳು ಬೇಕಾಗುತ್ತದೆ, ಧನ್ನ ಬ್ರಾಹ್ಮಣನಲ್ಲದಿರುವುದರಿಂದ, ಅವನಿಗೆ ಪೂಜಿಸಲು ಏನೇನೂ ಅವಕಾಶವಿಲ್ಲವೆಂದು. ಇದನ್ನು ಕೇಳಿ ಧನ್ನ ನಿರಾಶೆಗೊಳ್ಳುತ್ತಿದ್ದ, ಆದರೆ ಹತಾಶನಾಗುತ್ತಿರಲಿಲ್ಲ.

ಧನ್ನ, ತನ್ನ ಮಾಲೀಕನ ಸೇವೆಯನ್ನು ಮುಂದುವರಿಸಿದ್ದ, ಹಾಗೂ ಅವಕಾಶ ಸಿಕ್ಕಾಗಲೆಲ್ಲ ಸಾಲಿಗ್ರಾಮದ ಬಗ್ಗೆ ಬೇಡಿಕೊಳ್ಳುತ್ತಿದ್ದ. ಕಟ್ಟಕಡೆಗೆ, ಅವನ ಮಾಲೀಕ ಯೋಚಿಸಿದ, ಯಾವುದೋ ಒಂದು ಕಲ್ಲನ್ನು ಕೊಟ್ಟರಾಯಿತು, ಹಾನಿಯಿಲ್ಲ; ಧನ್ನನಿಗೆ ಹೇಗಿದ್ದರೂ ವ್ಯತ್ಯಾಸ ತಿಳಿಯುವುದಿಲ್ಲ. ಹೀಗೆ ಯೋಚಿಸಿ ಅವನಿಗೆ ಒಂದು ಸಾಧಾರಣ ಕಲ್ಲನ್ನು ನೀಡಿದ.

ತನ್ನ ಮಾಲೀಕನಿಗೆ ಧನ್ಯವಾದಗಳನ್ನು ಅರ್ಪಿಸಿದ, ಹಾಗೂ ಆ ಸಾಧಾರಣ ಕಲ್ಲನ್ನು ಸಾಲಿಗ್ರಾಮ ಶಿಲೆಯೆಂದೇ ಯಥಾರ್ಥವಾಗಿ ನಂಬಿದ. ಅದನ್ನು ಪೂಜಿಸುವ ವಿಧಾನದ ಬಗ್ಗೆ ತನ್ನ ಮಾಲೀಕನನ್ನು ಕೇಳಿದ. ಮಾಲೀಕ ಹೇಳಿದ, “ಎರಡು ಹೊತ್ತು ಅವನಿಗೆ ಆಹಾರವನ್ನು ನೀಡು, ಸ್ನಾನ ಮುಂತಾದವುಗಳನ್ನು ಮಾಡಿಸು. ಸಾರಾಂಶವೆಂದರೆ, ಅವನು ಜೀವಂತವಾಗಿ ಅಸ್ತಿತ್ವದಲ್ಲಿದ್ದಾನೆಂದೇ ನಡೆಸಿಕೋ, ನಿನ್ನ ಸ್ವಂತದವನ ಹಾಗೆ, ನಿನ್ನ ಭಗವಂತನನ್ನು!” ಧನ್ನ ನಿಸ್ಸಂಶಯವಾಗಿ ಪಾಲಿಸಲು ಒಪ್ಪಿಕೊಂಡ.

ಅವನು ತನ್ನ ಊಟದ ಸಮಯದಲ್ಲಿ ಆ “ಸಾಧಾರಣ ಕಲ್ಲಿಗೆ” ಸ್ನಾನ ಮಾಡಿಸಿದ, ಹಾಗೂ ತಾನು ಕೂರುವ ನೆಲದ ಮೇಲೆ ಅದಕ್ಕೆ ಆಸನ ನೀಡಿದ, ಮತ್ತು ಹರಿದಿರುವ ಬಟ್ಟೆಯಿಂದ ಮಾಡಿದ, ಆದರೆ ತೊಳೆದು ಸ್ವಚ್ಛವಾಗಿರುವ ವಸ್ತ್ರವನ್ನು ನೀಡಿದ. ತನ್ನ ಊಟದ ಡಬ್ಬವನ್ನು ತೆರೆದ; ಅದರಲ್ಲಿ ನಾಲ್ಕು ಚಪಾತಿಗಳು – ಜೋಳದ ಹಿಟ್ಟು ಹಾಗೂ ಪಾಲಕ್ ಸೊಪ್ಪಿನಿಂದ ಮಾಡಿದ, ಸಪ್ಪೆ ಚಪಾತಿಗಳು ಇದ್ದವು. ಅದನ್ನು ಕಲ್ಲಿನ ಮುಂದೆ ಹರಡಿದ, ಹಾಗೂ ಅಮಿತ ಉತ್ಸಾಹದಿಂದ ಕೃಷ್ಣನನ್ನು ಆಹ್ವಾನಿಸಿದ. ಕೆಲವು ಕ್ಷಣಗಳು ಸರಿದವು. ಕೃಷ್ಣನ ಯಾವುದೇ ಸುಳಿವಿಲ್ಲ. ಧನ್ನ ತನ್ನ ತೀವ್ರತೆಯನ್ನು ಹೆಚ್ಚಿಸಿದ, ಹಾಗೂ ಕೃಷ್ಣ ಊಟದಲ್ಲಿ ಅವನ ಪಾಲನ್ನು ತೆಗೆದುಕೊಳ್ಳುವ ತನಕ, ತಾನೂ ತಿನ್ನುವುದಿಲ್ಲವೆಂದು ಸಂಕಲ್ಪ ಮಾಡಿದ. ಊಟದ ಸಮಯ ಮೀರಿತು. ಕೃಷ್ಣನ ಸುಳಿವಿಲ್ಲ. ಧನ್ನನಿಗೆ ತೀವ್ರವಾಗಿ ಹೊಟ್ಟೆ ಹಸಿಯಲು ಶುರುವಾಯಿತು. ಆದರೂ ತನ್ನ ಪಟ್ಟು ಬಿಡಲಿಲ್ಲ.

ಎರಡು ಗಂಟೆಗಳು ಕಳೆದವು, ಅವನ ಮಾಲೀಕ ಅವನನ್ನು ಹುಡುಕುತ್ತಾ ಬಂದ. ವಿಷಯವೇನೆಂದು ವಿಚಾರಿಸಿದಾಗ, ಧನ್ನ ಪೂರ್ತಿ ಕಥೆಯನ್ನು ವಿವರಿಸಿದ. ಬ್ರಾಹ್ಮಣ ಗೇಲಿ ಮಾಡಿ ನಕ್ಕ, ಹಾಗೂ ಪ್ರಪಂಚದಲ್ಲೇ ಅವನೊಬ್ಬ ಶತಮೂರ್ಖನೆಂದು ಟೀಕಿಸಿದ. ಮಾಲೀಕ ಹೇಳಿದ, ಭಗವಂತ ನೈವೇದ್ಯವನ್ನು ತೆಗೆದುಕೊಳ್ಳುವ ರೀತಿಯ ಹೀಗೆ ಎಂದು, ಧನ್ನನ ಕೆಲಸ ಅರ್ಪಿಸುವುದಷ್ಟೆ, ಹಾಗೂ ಭಗವಂತ ಅದನ್ನು ಸ್ವೀಕರಿಸಿರುತ್ತಾನೆಂದು ತಿಳಿಯುವುದು. ಆದರೆ ಧನ್ನ ಕದಲದೆ ಅಲ್ಲೇ ಕುಳಿತ. 

ಅವನು ಹೇಳಿದ ತಾನೂ ನಿಜ, ತನ್ನ ಆಹಾರವೂ ನಿಜ, ಹಾಗಾಗಿ ದೇವರು ನಿಜವಾಗಿಯೂ ಆಹಾರವನ್ನು ಸ್ವೀಕರಿಸುವುದಾದರೆ, ಅವನು ಅದನ್ನು ಸ್ವತಃ ಸೇವಿಸಲು ಬರಬೇಕು. ಬ್ರಾಹ್ಮಣ ಜಿಗುಪ್ಸೆ ಹಾಗೂ ಅಪನಂಬಿಕೆಯಿಂದ ತಲೆಯನ್ನಾಡಿಸಿದ, ಹಾಗೂ, ಕೂಡಲೇ ಕೆಲಸಕ್ಕೆ ಬರದಿದ್ದರೆ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ ಹೊರಟುಹೋದ. ಧನ್ನ ಪ್ರತಿಕ್ರಿಯಿಸಲಿಲ್ಲ, ತನ್ನದೇ ಪ್ರಪಂಚದಲ್ಲಿ ಮುಳುಗಿಹೋಗಿದ್ದ.

ಧನ್ನನ ಕಣ್ಣುಗಳಿಂದ ಪ್ರೇಮ ಹಾಗೂ ಭಕ್ತಿಯ ಕಣ್ಣೀರು ಸುರಿಯಲಾರಂಭಿಸಿತು. ಅವನು ಅಲ್ಲಾಡದೆ ಅಲ್ಲೇ ಕುಳಿತ, ಕೃಷ್ಣನನ್ನು ಕರೆಯುತ್ತಾ, ತನ್ನದೇ ಭಾಷೆಯಲ್ಲಿ, ವೇದ-ಮಂತ್ರಗಳಿಂದಲ್ಲ. ಹಲವು ಗಂಟೆಗಳು ಕಳೆದವು. ವಿಷಪೂರಿತ ಬಾಣಗಳು ಚುಚ್ಚಿದಂತೆ, ಹೊಟ್ಟೆಹಸಿವು ಯಾತನೆ ನೀಡಲಾರಂಭಿಸಿತು. ಅವನು ಪಟ್ಟು ಬಿಡದಿರಲು ನಿಶ್ಚಯಿಸಿದ್ದ. ಇದು ಅವನ ಸಂಕಲ್ಪ ಹಾಗೂ ಭಗವಂತನ ಕೃಪೆಯ ನಡುವಿನ ಯುದ್ಧದಂತೆ ಕಾಣುತ್ತಿತ್ತು. ಚಪಾತಿ ಹಳಸಲು ಶುರುವಾಯಿತು. ಒಂದರ ಮೇಲೊಂದು ಎಂಟು ದಿನಗಳು ಕಳೆದವು. ಧನ್ನ ಪ್ರಾಯಶಃ ನಿರ್ಜೀವಾದ; ತನ್ನ ಕೊನೇ ಉಸಿರಾಡುತ್ತಿದ್ದ.

ಗ್ಯಾಲನ್ ಗಟ್ಟಲೆ ಕಣ್ಣೀರು, ಸಾವಿರಾರು ಕರೆಗಳು, ಎಂಟು ಸೂರ್ಯಾಸ್ತಗಳು ಹಾಗೂ ಸರಿಸುಮಾರು 200 ಗಂಟೆಗಳ ಬಳಿಕ, ಕೃಷ್ಣ ತನ್ನ ಸ್ವರೂಪವನ್ನು ಧನ್ನನ ಮುಂದೆ ಪ್ರಕಟಿಸಿದ. ಅಲೌಕಿಕ ಸೌಂದರ್ಯ, ಅತ್ಯದ್ಭುತ, ಆಕರ್ಷಕವಾದ ಮಂದಹಾಸ, ಸಹಜವಾಗಿ ಹೊರಹೊಮ್ಮುತ್ತಿದ್ದ ಹುಚ್ಚು ಹಿಡಿಸುವಂತಹ ಕಂಪು, ದಶಲಕ್ಷ ಸೂರ್ಯರ ಕಾಂತಿಯನ್ನು ಹೊಂದಿರುವ ಕಣ್ಣುಗಳು, ಲೆಕ್ಕವಿಲ್ಲದಷ್ಟು ಪೂರ್ಣಚಂದ್ರರ ತೇಜಸ್ಸಿನ ಹಾಗೆ ಕಂಗೊಳಿಸುತ್ತಿರುವ ಮುಖಾರವಿಂದ. ಕೃಷ್ಣ, ಧನ್ನನ ಪಕ್ಕದಲ್ಲೇ ಕುಳಿತುಕೊಂಡ, ಚಪಾತಿ ತಿನ್ನುವುದಕ್ಕೆ ಶುರುಮಾಡಿದ. ಧನ್ನ ಕಣ್ಣು ಮಿಟುಕಿಸದೆ ವೀಕ್ಷಿಸಿದ; ಆಶ್ಚರ್ಯದಿಂದಲ್ಲ, ತಾನು ನೀಡಿದ ಆಹಾರ, ಕೃಷ್ಣ ಸ್ವೀಕರಿಸುತ್ತಿರುವುದು ತನ್ನ ನಂಬಿಕೆ ಹಾಗೂ ಸಂಕಲ್ಪಕ್ಕೆ ಒತ್ತು ನೀಡಿತ್ತು.

ಕೃಷ್ಣ ಮೊದಲನೆಯ ಚಪಾತಿಯನ್ನು ತೆಗೆದುಕೊಂಡ, ಹಾಗೂ ಅದನ್ನು ಭುಜಿಸಿದ. ಧನ್ನನ ಆನಂದಕ್ಕೆ ಪಾರವೇ ಇಲ್ಲ. ಕೃಷ್ಣ ಇನ್ನೊಂದನ್ನು ತೆಗೆದುಕೊಂಡ, ಹಾಗೂ ಮತ್ತೊಂದು. ಭಗವಂತ ತನ್ನ ಭಕ್ತನ ಕೋರಿಕೆಯನ್ನು ಈಡೇರಿಸಲು ಪ್ರಕಟಗೊಂಡಿದ್ದ. ರಾಜಾಧಿರಾಜ, ಒಂದು ಸಾರ್ವಭೌಮತ್ವದಲ್ಲಿ ಭೋಜನ ಮಾಡುವವನು, ನೆಲದ ಮೇಲೆ ಕುಳಿತುಕೊಂಡು, ತನ್ನ ಭಕ್ತ ನೀಡಿದ ಹಳಸಲು ಚಪಾತಿಯನ್ನು ಸೇವಿಸುತ್ತಿದ್ದಾನೆ.

ಮೂರು ಚಪಾತಿಗಳನ್ನು ತಿಂದ ಬಳಿಕ, ಕೃಷ್ಣ ನಾಲ್ಕನೆಯದನ್ನು ತೆಗೆದುಕೊಳ್ಳಲು ಹೋದ, ಓರೆಗಣ್ಣಿನಿಂದ ನೋಡುತ್ತಿದ್ದ ಧನ್ನ, ತಕ್ಷಣ ಕೃಷ್ಣನ ಕೈಯನ್ನು ಹಿಡಿದುಕೊಂಡು, ಹೇಳಿದ, ತನಗೂ ಕೂಡ ತುಂಬಾ ಹೊಟ್ಟೆ ಹಸಿದಿದೆ, ಒಂದು ಚಪಾತಿಯನ್ನಾದರೂ ತನಗೋಸ್ಕರ ಉಳಿಸಬೇಕೆಂದು, ಯಾಕೆಂದರೆ, ನಿರಂತರ ಎಂಟು ದಿನಗಳಿಂದ ಏನನ್ನೂ ತಿಂದಿಲ್ಲವೆಂದು. ಒಂದು ಮಧುರವಾದ ಹಾಗೂ ಮೃದು ನಗೆಯನ್ನು ನಕ್ಕು, ಕೃಷ್ಣ ತನ್ನ ದಿವ್ಯ ಹಸ್ತವನ್ನು, ತನ್ನ ಭಕ್ತನ ತಲೆಯ ಮೇಲಿರಿಸಿದ. ಮಹದಾನಂದದ ಶತಕೋಟಿ ಈಟಿಗಳು ಧನ್ನನ ದೇಹದ ಕಣಕಣಗಳನ್ನು ಭೇದಿಸಿತು. ನೂರಾರು ಅತ್ಯದ್ಭುತವಾದ ಭೋಜನಗಳು ಅವರ ಮುಂದೆ ಪ್ರಕಟವಾಯಿತು. ಕೃಷ್ಣ ತನ್ನ ಕೈಗಳಿಂದಲೇ ಧನ್ನನಿಗೆ ತಿನಿಸಿದ.

ಯೋಚನೆಯ ಜೀವಂತಿಕೆಗೆ ಸಂಕಲ್ಪ ಎಂದು ಹೆಸರು, ಎಲ್ಲಾ ತರ್ಕಗಳನ್ನೂ ಮೀರಿರುವ ಒಂದು ಮಹೋನ್ನತ ಭಾವ. ಸಂಕಲ್ಪ, ಇದನ್ನು ಒಂದು ಜಾಗೃತ ಮನಸ್ಸು ಸ್ವೀಕರಿಸಿದಾಗ ಅದು ವಿಶ್ವಾಸವಾಗುತ್ತದೆ. ವಿಶ್ವಾಸದ ಜೊತೆ ಭಕ್ತಿಯನ್ನು ಜೋಡಿಸಿದಾಗ, ಶ್ರದ್ಧೆಯಾಗುತ್ತದೆ, ಮತ್ತು ಶ್ರದ್ಧೆಯಿಂದ ಸಾಧಿಸಲಾಗದ ಯಾವುದೇ ಕೆಲಸ ನನಗೆ ತಿಳಿದಿಲ್ಲ. ಆದರೂ ಬರೀ ಶ್ರದ್ಧೆಯೊಂದೇ ಸಾಕಾಗುವುದಿಲ್ಲ. ಆತ್ಮಸಾಕ್ಷಾತ್ಕಾರದ ಪಾಕವಿಧಾನಕ್ಕೆ ಶ್ರದ್ಧೆಯಲ್ಲದೇ ಇನ್ನೂ ಹಲವು ಪದಾರ್ಥಗಳು ಬೇಕು; ಆ ಬಗ್ಗೆ ಇನ್ನೊಮ್ಮೆ ತಿಳಿಸುವೆ. ಅದರಲ್ಲಿ ಒಂದು ಭಕ್ತಿಪೂರ್ವಕ ಸೇವೆ. ಅದನ್ನು ನೀವು ಇಲ್ಲಿ ಓದಬಹುದು.

ಈ ಸರಣಿಯ ನನ್ನ ಮುಂದಿನ ಬರಹ, ಸಂಕಲ್ಪವನ್ನು ಅಭ್ಯಾಸ ಮಾಡುವುದರ ಮೇಲೆ ಬೆಳಕು ಚೆಲ್ಲುತ್ತದೆ.

 ಶಾಂತಿ, 

ಸ್ವಾಮಿ.

Translated from: Devotee’s Resolution. God’s Manifestation.

Edited by: H. R. Ravi Kumar, Retd. Engineer, Shimoga.

Painting inspired by(copied from😛) https://youtu.be/Y4oXatiZ2JQ

Pay Anything You Like

Rekha Om

Avatar of rekha om
$

Total Amount: $0.00