ಕೆಲವು ಓದುಗರು ಕೆಳಗಿನ ಪ್ರಶ್ನೆಗಳನ್ನು ಕೇಳಿದ್ದಾರೆ:

ಪ್ರಶ್ನೆ: ಹರಿ ಓಂ ಜಿ. ಕಾಮನೆಗಳ ನಿಜ ಸ್ವಭಾವದ ಬಗ್ಗೆ ವಿವರಿಸಿರುವಿರಿ ಹಾಗೂ ನಮ್ಮೊಂದಿಗೆ ಹಂಚಿಕೊಂಡಿರುವಿರಿ, ಅದಕ್ಕಾಗಿ ಧನ್ಯವಾದಗಳು. ಕಾಮನೆಗಳು ಸುಳಿ ಇದ್ದಂತೆ; ಒಂದು ನಿರ್ದಿಷ್ಟವಾದ ಕಾಮನೆಯ ಆಳ, ಹಾಗೂ ಅದರ ತುದಿ ಮೊದಲ ಅರಿವಿಲ್ಲದೆ ಅದರಲ್ಲಿ ಸಿಕ್ಕಿ ಒದ್ದಾಡುತ್ತಿರುತ್ತೇವೆ. ಸ್ವಾಮೀಜಿ, ದಯವಿಟ್ಟು ಬೌದ್ಧಿಕ ಕಾಮನೆಗಳ ಬಗ್ಗೆ ಇನ್ನೂ ಸ್ವಲ್ಪ ವಿವರಿಸಿ. ನೀವು ಹೇಳಿದ್ದೀರಿ, “ಅನೇಕ ವೇಳೆ, ಬೌದ್ಧಿಕ ಕಾಮನೆಯನ್ನು ಪೂರೈಸಿಕೊಳ್ಳುವ ಪ್ರಯತ್ನವು, ಸಮಾಜಕ್ಕೆ ಒಂದು ಮೌಲ್ಯವಾದವನ್ನು ಸೃಷ್ಟಿಸಿಕೊಡುತ್ತದೆ. ದತ್ತಿ ಸಂಸ್ಥೆಗಳನ್ನು ಶುರುಮಾಡುವುದು, ಬೌದ್ಧಿಕ ಅಥವಾ ಆಧ್ಯಾತ್ಮಿಕ ಅನ್ವೇಷಣೆಯತ್ತ ಕೆಲಸ ಮಾಡುವುದು, ಸಾಮಾಜಿಕ ಅಥವಾ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು ಇವೆಲ್ಲಾ ಬೌದ್ಧಿಕ ಕಾಮನೆಗಳ ಉದಾಹರಣೆಗಳು” ಎಂದು.

ವೈಯಕ್ತಿಕ ಲಾಭವಿಲ್ಲದೆ ಸಮಾಜಕ್ಕೆ ಒಳ್ಳೆಯದನ್ನು ಮಾಡುವುದು ಅಥವಾ ಯಾರಿಗಾದರೂ ಸಹಾಯ ಮಾಡುವುದು ಬೌದ್ಧಿಕ ಕಾಮನೆ ಹೇಗಾಗುತ್ತದೆ? ಜನರು ಅದನ್ನು ಹೆಸರು/ಖ್ಯಾತಿಗಾಗಿ ಮಾಡಿದಾಗ ಅಹಂಕಾರ ಹುಟ್ಟಿಕೊಳ್ಳುತ್ತದೆ. ಆದರೆ ಕೆಲವರು, ಸೇವಾಕಾರ್ಯವನ್ನು ಹೃದಯಪೂರ್ವಕವಾಗಿ ನಿರ್ವಹಿಸುತ್ತಿರುತ್ತಾರೆ, ಬುದ್ಧಿಯಿಂದಲ್ಲ, ಇದು ಅಂತಹವರಿಗೆ ಹೇಗೆ ಅನ್ವಯಿಸುತ್ತದೆ. ಬುದ್ಧಿ ಅವರಿಗೆ ಯೋಚನೆಯನ್ನು ಕೊಡುತ್ತದೆ, ಆದರೆ ಅದನ್ನು ಅವರು ಭಾವಪೂರ್ವಕವಾಗಿ ನಿರ್ವಹಿಸುತ್ತಿರುತ್ತಾರೆ, ಹಾಗಿದ್ದಲ್ಲಿ ಬೌದ್ಧಿಕ ಕಾಮನೆಯಾಗುವುದಿಲ್ಲವಲ್ಲ.

“ಕಾಮನೆಗಳನ್ನು ಮೊದಲು ಅರ್ಥಮಾಡಿಕೊಳ್ಳಬೇಕು, ಆಮೇಲೆ ಪಳಗಿಸಬೇಕು, ನಂತರ ಅದರ ಮೇಲೆ ಅಧಿಪತ್ಯ ಹಾಗೂ ನಂತರ ವಶಪಡಿಸಿಕೊಂಡು ಅದನ್ನು ಸಂಪೂರ್ಣ ನಿವಾರಿಸಬೇಕು”, ದಯವಿಟ್ಟು ಇದರ ಬಗ್ಗೆ ವಿವರಿಸಿ. ಧ್ಯಾನದ ಮೂಲಕ ಮನಸ್ಸನ್ನು ಸ್ಥಿರಗೊಳಿಸಬಹುದು ಹಾಗಾಗಿ ಕಾಮನೆಗಳನ್ನೂ ಸಹ ಎಂದು ನೀವು ಹೇಳಿದ್ದೀರಿ. ಪ್ರತೀ ಬಾರಿ ಯೋಚನೆಗಳದ್ದೇ ಮೇಲುಗೈ ಆದರೆ ಏನು ಮಾಡುವುದು? ನಾವು ಕೇವಲ ಯೋಚಿಸುವ ಯಂತ್ರ ಎಂದು ಆ ಸಮಯದಲ್ಲಿ ಮನವರಿಕೆಯಾದಾಗ ನಮಗೆ ಎಷ್ಟೊಂದು ನಿರಾಶೆಯಾಗುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ಮನಸ್ಸನ್ನು ಪಳಗಿಸಲು ಆಗದಿದ್ದಾಗ ಅಸಮಾಧಾನವೆನಿಸುತ್ತದೆ. ಹಾಗಾಗಿ ನಾವು ಏನು ಮಾಡಬಹುದು? ಧನ್ಯವಾದಗಳು.

ಸಂಕಲ್ಪ ಹಾಗೂ ಇಚ್ಛೆ ಇವೆರಡರ ವ್ಯತ್ಯಾಸವನ್ನು ಅರಿಯುವುದು ತುಂಬಾ ಮುಖ್ಯವಾಗುತ್ತದೆ. ಸಂಕಲ್ಪವೆನ್ನುವುದು, ನಿಮ್ಮ ಕಾರ್ಯ ಪಥವನ್ನು ರೂಪಿಸುವ ಯೋಚನೆ. ಆದಾಗ್ಯೂ, ನೀವು ಅದರ ಫಲಿತಾಂಶಕ್ಕೆ ಅಂಟಿಕೊಂಡಾಗ ಅದು ಸಂಕಲ್ಪವಾಗಿ ಉಳಿಯುವುದಿಲ್ಲ, ಅದು ಇಚ್ಛೆಯಾಗುತ್ತದೆ. 

ನನ್ನ ಪ್ರತಿಯೊಂದು ಲೇಖನದ ಗುರಿ ಆಧ್ಯಾತ್ಮಿಕ ಪ್ರಾಪ್ತಿಯೇ ಹೊರತು ಬೇರೇನಿಲ್ಲ. ಧ್ಯಾನ ಯೋಗದ ದೃಷ್ಟಿಯಲ್ಲಿ ಎಲ್ಲಾ ರೀತಿಯ/ವರ್ಗದ ಕಾಮನೆಗಳು, ಧ್ಯಾನಿಯನ್ನು ಬಂಧಿಸುತ್ತದೆ. ಒಳ್ಳೆಯ ಅಥವಾ ಕೆಟ್ಟ ಕಾಮನೆ ಎನ್ನುವುದು ಕೇವಲ ನೇಮಕಾತಿ ಮಾತ್ರ. ಮನಸ್ಸಿನಲ್ಲಿ ಒಂದು ಕಾರ್ಯದ ಯೋಚನೆ ಹುಟ್ಟದೇ, ಕೇವಲ ಹೃದಯದಿಂದ ಅದನ್ನು ಮಾಡುವುದು ಸಾಧ್ಯವಿಲ್ಲ. ಒಂದು ಪ್ರಚೋದನೆ, ತ್ವರಿತವಾದದ್ದಾದರೂ ಸಹ, ಅದು ಮೊದಲು ಯೋಚನೆಯಾಗಿರುತ್ತದೆ. ದಯವಿಟ್ಟು ಗಮನಿಸಿ, ನಾವು ಇಲ್ಲಿ ಮನಸ್ಸಿನ ಬಗ್ಗೆ ಮಾತನಾಡುತ್ತಿದ್ದೇವೆ ಬುದ್ಧಿಯ ಬಗ್ಗೆ ಅಲ್ಲ.

ಮೊದಮೊದಲು ಯೋಚನೆಗಳು ಪ್ರಬಲವಾಗಿರುತ್ತದೆ, ಅಭ್ಯಾಸ ಮಾಡುತ್ತಾ ಹೋದಂತೆ ಮನಸ್ಸಿನ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸಬಹುದು, ಹಾಗಾಗಿ ಯೋಚನೆಗಳ ಮೇಲೆ. ನಾನು ಪುನಃ ಹೇಳುತ್ತಿದ್ದೇನೆ, ಅದು ಸರಳವಲ್ಲ. ತಾಳ್ಮೆ ಹಾಗೂ ನಿರಂತರ ಪ್ರಯತ್ನದ ಪ್ರತಿಯಾಗಿ ಬೆಲೆ ಕಟ್ಟಲಾಗದ ಪುರಸ್ಕಾರ ದೊರೆಯುತ್ತದೆ. ಧ್ಯಾನ ವಿಜ್ಞಾನದ ಬಗ್ಗೆ ನಿರೀಕ್ಷಿತ ಭವಿಷ್ಯದಲ್ಲಿ ಬರೆಯಲಿದ್ದೇನೆ.

ಸಧ್ಯಕ್ಕೆ ಇದು ತಿಳಿದಿರಲಿ, ಸತತ ಪ್ರಯತ್ನದಿಂದ ಫಲಿತಾಂಶ ದೊರೆಯುತ್ತದೆ. ಪ್ರತಿಯೊಂದು ಬಾರಿ ನಿಮ್ಮ ಮನಸ್ಸು ಪರಿಭ್ರಮಿಸಿದಾಗಲೆಲ್ಲಾ, ಅದನ್ನು ನಿಮ್ಮ ಧ್ಯಾನದತ್ತ ಸೌಮ್ಯವಾಗಿ ಮರಳಿ ತನ್ನಿ. ಸ್ವಲ್ಪ ಸಮಯದ ನಂತರ, ತುಂಬಾ ಸಮಯದ ನಂತರ ಅದು ಅಲೆದಾಡುವುದು ನಿಲ್ಲುತ್ತದೆ. ಯಾವುದೇ ಪರ್ಯಾಯ ಮಾರ್ಗವಿಲ್ಲ! ಮನಸ್ಸಿನ ಶಾಂತತೆಯನ್ನು ಸಾಧಿಸುವುದು ಒಂದು ಅಸಾಧಾರಣ ಕಾರ್ಯ ಹಾಗೂ ಅದಕ್ಕೆ ಅದ್ಭುತವಾದ ಶ್ರಮದ ಅಗತ್ಯವಿದೆ, ಆರಂಭದಲ್ಲಂತೂ ಅಗತ್ಯವಿದೆ.

ಪ್ರಶ್ನೆ: ನಮಸ್ತೆ ಸ್ವಾಮೀಜಿ, ನಿಮ್ಮ ಬ್ಲಾಗ್ ಓದಲು ತುಂಬಾ ಖುಷಿಯಾಗುತ್ತದೆ, ಹಲವಾರು ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿರುವುದಕ್ಕೆ ಧನ್ಯವಾದಗಳು. ನನ್ನೆರಡು ಪ್ರಶ್ನೆಗಳು ಹೀಗಿವೆ. ಆತ್ಮಜ್ಞಾನ ಹಾಗೂ ನಮ್ಮ ಸ್ವಾಭಾವಿಕತೆಯನ್ನು ಅರಿತುಕೊಳ್ಳುವುದರಲ್ಲಿನ ವ್ಯತ್ಯಾಸವೇನು? ನಾವು ‘ಅಹಂ ಬ್ರಹ್ಮಾಸ್ಮಿ’ ಎಂದರೆ, ಅದರರ್ಥ ‘ಆತ್ಮಜ್ಞಾನ’ ಮತ್ತು ‘ಬ್ರಹ್ಮಜ್ಞಾನ’ ಎರಡೂ ಒಂದೇ ಎಂದೆ? ನಿಮ್ಮ ಮಾರ್ಗದರ್ಶನವನ್ನು ಎದುರು ನೋಡುತ್ತಿದ್ದೇವೆ. ಪ್ರಣಾಮ.

ಆತ್ಮಜ್ಞಾನ ಹಾಗೂ ನಿಮ್ಮ ಸಹಜ ಗುಣವನ್ನು ಅರಿತುಕೊಳ್ಳುವುದು ನಿಷ್ಕೃಷ್ಟವಾಗಿ ಒಂದೇ ಆಗಿದೆ. ನಿಮಗೆ ನೀವು ಯಾರು ಎಂದು ಅರಿವಾದಾಗ(ಜ್ಞಾನ), ಅದು ಆತ್ಮಜ್ಞಾನವಾಗುತ್ತದೆ. ಬ್ರಹ್ಮಜ್ಞಾನ ಮತ್ತು ಆತ್ಮಜ್ಞಾನ ಎರಡೂ ಒಂದೇ. ಆದರೆ ತಿಳಿದಿರಲಿ, ಈ ವಿವೇಚನೆ ಬೌದ್ಧಿಕವಾಗಿ ಮಾತ್ರ ಆದರೆ ಸಾಲದು. ಇದು ನಮ್ಮ ಬುದ್ಧಿಶಕ್ತಿಯ ಗ್ರಹಿಕೆಗೆ ಮೀರಿದ್ದು, ಅದನ್ನು ಅನುಭವ ಮಾಡಿಕೊಳ್ಳುವತ್ತ ಕಾರ್ಯಶೀಲರಾಗಬೇಕು. ಭಗವದ್ಗೀತೆಯಿಂದ ಒಂದೆರಡು ಶ್ಲೋಕಗಳನ್ನು ಉಲ್ಲೇಖಿಸಲು ಇಚ್ಛಿಸುತ್ತೇನೆ, ಆದರೆ ಲಿಪ್ಯಂತರಣದ ಅಭಾವದಿಂದ ಆಗುತ್ತಿಲ್ಲ. 

ಮತ್ತು, ವಾರಕ್ಕೊಂದರಂತೆ ಕೆಲವು ಬ್ಲಾಗ್ ಅನ್ನು  ಪೋಸ್ಟ್ ಮಾಡಲಿದ್ದೇನೆ. ನಿರೀಕ್ಷಿಸಿ. 

ಹರೇ ಕೃಷ್ಣ 

ಸ್ವಾಮಿ

Translated from: Mind, Thoughts and Desires

Edited by: H. R. Ravi Kumar, Retd. Engineer, Shimoga.

Painting inspired by(copied from😛) https://youtu.be/BT18w1XrPnk