ಸಕಾರಾತ್ಮಕವಾಗಿರು ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಜೀವನ ಹೊಡೆದುರುಳಿಸುತ್ತಲೇ ಇದ್ದರೆ, ಸಕಾರಾತ್ಮಕವಾಗಿರುವುದು ಹೇಗೆ ಎಂದು ಯಾರೂ ಹೇಳುವುದಿಲ್ಲ. ಈ ಕೆಳಗಿನ ಬರಹದಲ್ಲಿ ಅದಕ್ಕೆ ಉತ್ತರವಿದೆ. ಅಷ್ಟೇ ಅಲ್ಲ, ಸಂತೋಷವಾಗಿರುವುದು ಹಾಗೂ ಸಕಾರಾತ್ಮಕವಾಗಿರುವುದು ಒಂದೇ ಅಲ್ಲ! ಏಕೆ? ಮರಣದಂಡನೆ ವಿಧಿಸಲ್ಪಟ್ಟ ಕೈದಿ, ಜಾರ್ವಿಸ್ ಜೇ, ಅವರ ಆಶ್ಚರ್ಯಕರವಾದ ಕಥೆಯಿಂದ ನೀವು ಇದನ್ನು ಅರ್ಥಮಾಡಿಕೊಳ್ಳಲು ಸಹಾಯವಾಗಬಹುದು.

ಸಕಾರಾತ್ಮಕವಾಗಿರುವುದು ಹೇಗೆ? ಈ ಪ್ರಶ್ನೆ ನನ್ನಲ್ಲಿ ತುಂಬಾ ಕೇಳಲ್ಪಡುತ್ತದೆ. ಹಾಗೂ, ಅನೇಕ ವೇಳೆ, ಜನರು, ನಾವು ಸಕಾರಾತ್ಮಕವಾಗಿರಲು ಇಚ್ಛಿಸುತ್ತೇವೆ ಎಂದಾಗ, ವಾಸ್ತವಿಕವಾಗಿ ಅವರು ಹೇಳುತ್ತಿರುವುದು, ಬಹುತೇಕ ಸಂದರ್ಭಗಳಲ್ಲಿ ತಾವು ಸಂತೋಷದಿಂದ ಮತ್ತು ಆಶಾದಾಯಕವಾಗಿ ಇರುವುದು ಹೇಗೆ ಎಂದು. ಮತ್ತು ಪ್ರತಿಕೂಲವನ್ನು ಎದುರಿಸುವಾಗ ತಾನು ನಿರಾಶೆ ಹಾಗೂ ತಳಮಳಗೊಳ್ಳದೆ, ಹೇಗಾದರೂ ನೆಮ್ಮದಿಯಿಂದ ಇರಬೇಕು ಎಂದು ಬಯಸುವುದು.

ನಿಜವೇನೆಂದರೆ, ಜೀವನ ಒಂದು ಕಠಿಣ ಪರಿಶ್ರಮ ಹಾಗೂ ಸದಾ ಸಕಾರಾತ್ಮಕವಾಗಿರಲು ಏಕೈಕ ಸುಲಭ ದಾರಿ ಅಂತ ಯಾವುದೂ ಇಲ್ಲ. ಹಾಗೆ ಹೇಳಿದರೂ ಸಹ, ಆದಷ್ಟು ಸಕಾರಾತ್ಮಕವಾಗಿರುವುದನ್ನು ಕಲಿಯಬಹುದು. ಸ್ವಾಭಾವಿಕವಾಗಿ ಸಕಾರಾತ್ಮಕ ಹಾಗೂ ಆತ್ಮವಿಶ್ವಾಸದಿಂದ ಇರುವಂತೆ ಕಾಣುವವರೂ ಕೂಡ ಪ್ರಜ್ಞಾಪೂರ್ವಕವಾಗಿ ಅಥವಾ ಅಲ್ಲದಿದ್ದರೂ, ಹಾಗಿರಲು ಕಲಿತಿದ್ದಾರೆ. ನಕಾರಾತ್ಮಕತೆಯ ಬಗ್ಗೆ ನಿಮಗೆ, ನನ್ನ ಎರಡು ಪೈಸೆ (ಸೆಂಟ್) ಯಷ್ಟು ಮೌಲ್ಯವನ್ನು ನೀಡುವುದಕ್ಕೆ ಮುನ್ನ, ಈ ಪುಟ್ಟ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅನುಮತಿ ನೀಡಿ.

ಹಲವಾರು ಸಾಕುಮನೆಗಳಿಗೆ ಸ್ಥಳಾಂತರಗೊಂಡ ಜಾರ್ವಿಸ್ ಜೇ ಮಾಸ್ಟರ್ ರ ಬಾಲ್ಯ ಸಾಕಷ್ಟು ಕಠಿಣವಾಗಿತ್ತು. ತನ್ನನ್ನು ರಕ್ಷಿಸಿಕೊಳ್ಳವ ಹಾಗೂ ನಿಭಾಯಿಸಿಕೊಳ್ಳುವ ಪ್ರಕ್ರಿಯೆಗೆ ಹಿಂಸಾಚಾರವೇ ಉತ್ತರವಾಯಿತು. ಹತ್ತು ವರ್ಷ ಸೆರೆವಾಸದ ತೀರ್ಪಿನಲ್ಲಿ ಜೈಲು ಸೇರಿದಾಗ ಅವನಿಗೆ 19 ವರ್ಷ. ಹಾಗೂ ನಂತರ, ಅಲ್ಲಿನ ಕಾವಲುಗಾರನ ಕೊಲೆ ಆರೋಪ ಅವನ ಮೇಲೆ ಬಂತು ( ಆ ಘಟನೆ ನಡೆಯುವ ಸಮಯದಲ್ಲಿ ಜಾರ್ವಿಸ್ ತನ್ನ ಜೈಲು ಕೋಣೆಯಲ್ಲಿ ಬಂಧಿತನಾಗಿದ್ದ!) ಹಾಗೂ ಅವನಿಗೆ ಮರಣದಂಡನೆ ವಿಧಿಸಲಾಯಿತು. ಮರಣದಂಡನೆಯಲ್ಲಿ ಇರುವಾಗ, ತಾನು ಬರೆಯುತ್ತಿರುವ ಪುಸ್ತಕ, ‘ಫೈಂಡಿಂಗ್ ಫ್ರೀಡಂ’ ನಲ್ಲಿ ಒಂದು ಕುತೂಹಲಕಾರಿ ಅವಲೋಕನವನ್ನು ಬರೆಯುತ್ತಾರೆ, ಅದರ ಸಣ್ಣ ಲಿಪ್ಯಂತರ ಇಲ್ಲಿದೆ:

“ಚಾನಲ್ ಏಳನ್ನು ಪರಿಶೀಲಿಸು, ಜಾರ್ವಿಸ್,” ಒಂದು ಸಂಜೆ ಧ್ಯಾನದ ಪುಸ್ತಕವನ್ನು ಓದುತ್ತಿರುವಾಗ, ನನ್ನ ನೆರೆಯವ ತನ್ನ ಪಕ್ಕದ ಕೋಣೆಯಿಂದ ಹೇಳಿದ. “ಲೂಯಿಸಿಯಾನದಲ್ಲಿ ನಡೆಯುತ್ತಿರುವ ‘ಕು ಕ್ಲಕ್ಸ ಕ್ಲಾನ್’ ಮೇಳವನ್ನು ಅವರು ತೋರಿಸುತ್ತಿದ್ದಾರೆ. ಕ್ಲಾನ್ ಜನರು ಶ್ರೇಷ್ಠತೆಯ ನಿಷ್ಪ್ರಯೋಜಕ ಸಂದೇಶಗಳ ಕೂಗಾಟ ಹಾಗೂ ಕಿರುಚಾಟ ಮಾಡುತ್ತಿದ್ದಾರೆ. ಅವರು ಏನು ಹೇಳುತ್ತಿದ್ದಾರೆಂದು ನೀನು ಕೇಳಿಸಿಕೊಂಡಯಾ?”

“ಇಲ್ವಲ್ಲಾ, ನಾನು ದ್ವನಿಯನ್ನು ಕಮ್ಮಿ ಇಟ್ಟಿದ್ದೇನೆ, ಕೇಳಿಸಿಕೊಳ್ಳಲಿಲ್ಲ,” ದೂರದರ್ಶನದತ್ತ ನೋಡುತ್ತಾ ಹೇಳಿದೆ. “ಆದರೆ, ಕುಪಿತಗೊಂಡ ಮುಖಗಳು ಮತ್ತು ಜಾತಿವಾದಿ ಭಿತ್ತಿಪತ್ರಗಳನ್ನಂತೂ ನೋಡಿದೆ.”

ಹತ್ತು ನಿಮಿಷಗಳ ನಂತರ ಒಮರ್ ಮತ್ತೆ ಕೂಗಿದ, “ಏ ಜಾರ್ವಿಸ್, ಆ ಜನಗಳನ್ನೆಲ್ಲಾ ನೋಡು, ಸ್ಯಾನ್ ಫ್ರಾನ್ಸಿಸ್ಕೋದ ಆ ಮೆರವಣಿಗೆಯಲ್ಲಿ ಸಾವಿರ ಜನರಾದರೂ ಇರಬೇಕು. ಅವರು ನಿನಗೆ ಕಾಣುತ್ತಾರೋ?”

“ವಾವ್!” ನಾನು ಹೇಳಿದೆ, ನನ್ನ ಪರದೆ ಮೇಲಿನ ಬೃಹತ್ ಪ್ರದರ್ಶನದ ಕಡೆ ನೋಡುತ್ತಾ. “ಅವರಿಗೆ ಏನಾಗಿದೆಯಂತೆ?”

” ಕೆಲವೊಂದು ಸ್ಥಳಗಳಲ್ಲಿ ಮರಗಳನ್ನು ಕತ್ತರಿಸುವುದನ್ನು ತಡೆಯುವಂತೆ ಪರಿಸರವಾದಿಗಳು ಕೋರುತ್ತಿದ್ದಾರೆ. ಅವರು ಹೇಳುತ್ತಿದ್ದಾರೆ, ಗ್ರಹವು ನಾಶವಾಗುತ್ತಿದೆ ಹಾಗೂ ಹೆಚ್ಚು ಹೆಚ್ಚು ವನ್ಯಜೀವಿಗಳ ಪ್ರಭೇದಗಳು ಅಳಿವಿನ ಸಮೀಪವಾಗುತ್ತಿದೆ ಎಂದು.”

“ಅದು ಸರಿಯಾ?, ಅವರನ್ನು ನೋಡಿದರೇ ಹೇಳಬಹುದು ಅವರು ಅಸಮಾಧಾನದಿಂದ ಇದ್ದಾರೆ ಎಂದು. ಆ ಹೆಂಗಸನ್ನು ನೋಡು ಹೇಗೆ ಕೋಪದಿಂದ ಧ್ವನಿವರ್ಧಕದಲ್ಲಿ ಹೇಳುತ್ತಿದ್ದಾಳೆ. ಹಾಗೂ ಹೇಗೆ ಆ ಪ್ರದರ್ಶನಕಾರರು ಭಿತ್ತಿಪತ್ರಗಳನ್ನು ಎತ್ತಿಹಿಡಿಯುತ್ತಾ, ಕಿರಿಚುತ್ತಾ ಹಾಗೂ ಬಂಧಿತರಾಗುತ್ತಿದ್ದಾರೆ?. ಅಷ್ಟೊಂದು ಕಿರುಚಾಡುತ್ತಿದ್ದಾರೆ ಎಂದರೆ ಅವರೆಲ್ಲಾ ಸಾಕಷ್ಟು ಕೆರಳಿರಬೇಕು.”

ಸ್ವಲ್ಪ ಹೊತ್ತಿನ ನಂತರ ಒಮರ್ ಕೂಗಿದ, ” ಹೇ, ಅದನ್ನು ಪರಿಶೀಲಿಸು. ಇನ್ನೂ ವೀಕ್ಷಿಸುತ್ತಿರುವೆಯಾ? ಅಧ್ಯಕ್ಷರು ಮತ್ತು ಆ ಎಲ್ಲಾ ಕಾಂಗ್ರೆಸ್ಸಿಗರನ್ನು ನೋಡು, ಅವರ ಕಾದಾಟ ಮತ್ತು ವಾದಗಳನ್ನು, ಅದೇ ಆ ರಾಷ್ಟ್ರೀಯ ದೂರದರ್ಶನದಲ್ಲಿ, ಈಗಿನ ಬೀಕರ ಆರ್ಥಿಕತೆಗೆ ಬೇರೆಯವನೇ ಕಾರಣ, ಎಂದು ಪ್ರತಿಯೊಬ್ಬರೂ ಜನಸಾಮಾನ್ಯರನ್ನು ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.”

“ಹಾ, ನಾನು ಅವರನ್ನ ನೋಡ್ತಾ ಇದ್ದೀನಿ. ಅದಕ್ಕಾಗಿಯೋ ಅವರು ಅಷ್ಟು ಸಿಟ್ಟು ಮಾಡಿಕೊಂಡಿರುವುದು? ಯಾವುದೋ ಕಾರಣಕ್ಕೆ ಗದ್ದಲ ಮಾಡುತ್ತಿದ್ದಾರೆ ಎಂದು ಹೇಳಬಲ್ಲೆ. ಆ ಪ್ರಾಧಿಕಾರದ ಸದಸ್ಯ(ಸೆನೆಟರ್) ಅಂತೂ ಪ್ರಾಯಶಃ ಉಗುಳುತ್ತಿದ್ದಾನೆ. ಆದರೆ ನಿನಗೆ ಗೊತ್ತಾ ನಿಜವಾಗಲೂ ಏನು ಆಸಕ್ತಿದಾಯಕವಾಗಿದೆ ಅಂತ ಒಮರ್?”

“ಇಲ್ಲ, ಏನದು?”

“ಕಾಂಗ್ರೆಸ್ಸಿಗರ ಹಾಗೂ ಯು.ಎಸ್.ಎ ಅಧ್ಯಕ್ಷರ ಮುಖದ ಮೇಲೆ ಕಾಣುತ್ತಿರುವ ಕೋಪ ಹಾಗೂ ಕಹಿ, ಪರಿಸರವಾದಿಗಳ ಮತ್ತು ಕ್ಲಾನ್ ಜನಗಳ ಮುಖದ ಮೇಲಿರುವುದು ಎಲ್ಲಾ ಒಂದೇ ಆಗಿದೆ. ಅವರೆಲ್ಲಾ ಕೇವಲ ಕುಪಿತ ಜನರ ಹಿಂಡು.”

ಕೋಪ, ಕ್ರೋಧ, ನಕಾರಾತ್ಮಕತೆ ಇವು ಸ್ವಾಭಾವಿಕ ವಲ್ಲದಿದ್ದರೂ ಮಾನವರ ಸಾಮಾನ್ಯ ಭಾವನೆಗಳು. ಬಹುತೇಕ ಜನರು ದಿನನಿತ್ಯದಲ್ಲಿ ಹಲವು ಬಾರಿ ಅನುಭವಿಸುತ್ತಾರೆ. ನಮ್ಮ ಸುತ್ತಲೂ, ಮನೆಯಲ್ಲಿ, ಕೆಲಸದಲ್ಲಿ, ಮಾರುಕಟ್ಟೆಯಲ್ಲಿ, ರೈಲಿನಲ್ಲಿ, ಎಲ್ಲೆಲ್ಲೂ ಜನರಿದ್ದಾರೆ. ಇವರಲ್ಲಿ ಅನೇಕರು ತಮ್ಮ ಜೀವನದಲ್ಲಿ ತುಂಬಾ ಪ್ರತಿಕೂಲತೆಯನ್ನು ಅನುಭವಿಸುತ್ತಿರುತ್ತಾರೆ. ಅವರಲ್ಲಿ ಕೆಲವರು ಕೋಪವನ್ನು ತಮ್ಮ ಮೇಲೆ ತೆಗೆದುಕೊಳ್ಳುತ್ತಾರೆ, ಇನ್ನೂ ಕೆಲವರು ಸರ್ಕಾರದ ಮೇಲೆ, ತಮ್ಮ ಪ್ರೀತಿಪಾತ್ರರ ಮೇಲೆ, ನಿಮ್ಮ ಮೇಲೆ ಹೀಗೆ ಮುಂತಾದವುಗಳ ಮೇಲೆ. ಕುಪಿತ ಜನರ ಹಿಂಡು. ನೀವೂ ಅವರಂತೆ ಆಗಬೇಕೇ?

ಈ ಪ್ರಪಂಚ ಹೀಗೆ ಇರಲು ಸಾಧ್ಯ. ಕೋಪಿ ಹಾಗೂ ನಿರ್ದಯಿ. ನಾವು ಏನು ಮಾಡುವುದು ಈಗ? ನಮ್ಮ ಬಳಿ ಆಯ್ಕೆ ಇದೆ. ನಾವೂ ಕುಪಿತರಾಗಿ ಅವರಂತೆಯೇ ಆಗಬಹುದು ಅಥವಾ ನಾವು ಏನನ್ನು ಯೋಚಿಸಬೇಕು, ಮಾತಾಡಬೇಕು ಹಾಗೂ ಹೇಗೆ ಪ್ರತಿಕ್ರಿಯೆ ಕೊಡಬೇಕು ಎಂದು ಪ್ರಜ್ಞಾಪೂರ್ವಕ ಆಯ್ಕೆ ಮಾಡಬಹುದು. ಆಂತರಿಕ ಶಾಂತಿ ಇದ್ದರೆ, ಪ್ರಪಂಚದಲ್ಲೂ ಶಾಂತಿಯನ್ನು ಅನುಭವಿಸಬಹುದು. ಹಾಗೂ ಎಷ್ಟು ಆಂತರಿಕ ಶಾಂತಿಯೋ ಅಷ್ಟು ಹೆಚ್ಚು ಕೇಂದ್ರೀಕೃತವಾಗಿರುತ್ತೀರಿ.

ನಾನು ಹೇಳುವುದು ನಿಮಗೆ ತಿಳಿಯುವುದಾದರೆ, ಒಬ್ಬ ಕೇಂದ್ರೀಕೃತ ವ್ಯಕ್ತಿಯಲ್ಲಿ ಸಂತೋಷ ಚಿಮ್ಮುತ್ತಿರುತ್ತದೆ ಎಂದಲ್ಲಾ. ಅವನು ಅಥವಾ ಅವಳಲ್ಲಿ ಉತ್ಸಾಹ ಅಲೆಗಳು ಇಲ್ಲದೆ ಇರಬಹುದು, ಆದರೆ ಚಳಿಗಾಲದಲ್ಲಿ ಸೌಮ್ಯವಾಗಿ ಹರಿಯುವ ನದಿಯಂತೆ, ಒಂದು ಸುಸ್ಥಿರವಾದ ವಾಸ್ತವಿಕ ಸಕಾರಾತ್ಮಕತೆಯ ಹರಿವಿರುತ್ತದೆ. ನಿಮ್ಮ ಯೋಚನೆಯಲ್ಲಿ, ಮಾತಿನಲ್ಲಿ ಹಾಗೂ ನಡತೆಯಲ್ಲಿ ಹೆಚ್ಚು ಪ್ರಾಮಾಣಿಕತೆ ಹಾಗೂ ನೈಜತೆ ಇದ್ದಷ್ಟೂ, ನೀವು ಹೆಚ್ಚು ಸಕಾರಾತ್ಮಕತೆ ಹಾಗೂ ಸಂತೋಷದಿಂದಿರುತ್ತೀರಿ.

ಆಂತರಿಕ ಶಾಂತಿಯ ಮೂಲ, ಸರಳತೆ.

ಒಂದು ಸಂಜೆ, ಜಾನಿಯ ಅಜ್ಜಿ, ಅವನನ್ನು ಅಡುಗೆಗೆ ನೀರು ತರಲು ಹತ್ತಿರದ ಕೊಳಕ್ಕೆ ಕಳುಹಿಸಿದಳು. ಅವನು ಬಕೆಟ್ಟನ್ನು ನೀರಿನಲ್ಲಿ ಅದ್ದುತ್ತಿದ್ದಂತೆ, ಎರಡು ದೊಡ್ಡ ಕಣ್ಣುಗಳು ನೀರಿನ ಒಳಗಿನಿಂದ ಅವನತ್ತ ನೋಡುತ್ತಿರುವುದು ಕಾಣಿಸಿತು. ಬಕೆಟ್ಟನ್ನು ಅಲ್ಲಿಯೇ ಬಿಟ್ಟು ಅಡುಗೆಮನೆಯತ್ತ ಓಡಿದ.

“ಎಲ್ಲಿ ನೀರು?” ಅವಳು ಕೇಳಿದಳು. “ಹಾಗೂ ನನ್ನ ಬಕೆಟ್?”

“ಆ ಕೊಳದಿಂದ ನನಗೆ ನೀರು ತರುವ ಆಗುವುದಿಲ್ಲ ಅಜ್ಜಿ,” ಜಾನಿ ಉದ್ಗರಿಸಿದ. “ಅಲ್ಲಿ ಒಂದು ದೊಡ್ಡ ವಯಸ್ಸಾದ ಮೊಸಳೆ ಇದೆ!”

“ಮೊಸಳೆ ಬಗ್ಗೆ ಚಿಂತಿಸಬೇಡ, ಜಾನಿ. ಬಹಳಷ್ಟು ವರ್ಷಗಳಿಂದ ಅದು ಅಲ್ಲೇ ಇದೆ, ಹಾಗೂ ಅದು ಯಾರಿಗೂ ಹಾನಿ ಮಾಡಿಲ್ಲ. ನೀನು ಅದನ್ನು ನೋಡಿ ಎಷ್ಟು ಹೆದರಿದ್ದೀಯೋ, ಅದೂ ನಿನ್ನ ನೋಡಿ ಅಷ್ಟೇ ಹೆದರಿರಬೇಕು.”

“ಹಾಗಾದರೆ, ಅಜ್ಜಿ”, ಉತ್ತರಿಸಿದ ಜಾನಿ, “ಅದು ನನ್ನಷ್ಟೇ ಹೆದರಿದ್ದರೆ ಆ ನೀರು ಕುಡಿಯುವುದಕ್ಕೆ ಉಪಯುಕ್ತವಲ್ಲ!”

ಆಂತರಿಕ ಪ್ರಪಂಚದಲ್ಲಿ, ಹೊರಗಿನ ಪ್ರಪಂಚದಷ್ಟೇ ಕೋಪ ಮತ್ತು ದ್ವೇಷದ ಬಿರುಗಾಳಿ ಕ್ಷುದ್ರವಾಗಿದ್ದಲ್ಲಿ, ಈ ಪ್ರಪಂಚ ಜೀವಿಸಲು ಅನರ್ಹವಾಗಿ ಬಿಡುತ್ತದೆ. ಯಾರು ಕೋಪದ ಬುದ್ಧಿ, ಅಸಮಾಧಾನದ ಭಾವನೆ ಹೊಂದಿರುತ್ತಾರೋ, ಅವರ ಮನಸ್ಸು ಹಾಗೂ ದೇಹದಲ್ಲಿ ಅನಾರೋಗ್ಯ ತ್ವರಿತವಾಗಿ ಕಾಣಿಸಿಕೊಳ್ಳುತ್ತದೆ. ಅದೇ ಸರಳ ಹೃದಯಿ, ಆತ್ಮತೃಪ್ತಿಯುಳ್ಳವನು, ಸಹಜವಾಗಿ ಶಾಂತಿಯಿಂದ ಇರುತ್ತಾನೆ, ಹಾಗಾಗಿ ಸಕಾರಾತ್ಮಕವಾಗಿಯೂ ಕೂಡ.

ಲೇಮನ್ ಪ್ಯಾಂಗ್( ೭೪೦-೮೦೮) ಹೇಳಿದ, “ಮನಸ್ಸು ಶಾಂತಿಯಿಂದಿದ್ದರೆ, ಪ್ರಪಂಚವೂ ಶಾಂತಿಯಿಂದಿರುತ್ತದೆ. ಯಾವುದೂ ವಾಸ್ತವವಲ್ಲ, ಯಾವ ಅನುಪಸ್ಥಿತಿಯೂ ಇಲ್ಲ. ವಾಸ್ತವಿಕತೆಗೆ ಗಂಟು ಹಾಕಿಕೊಳ್ಳದ, ಶೂನ್ಯದಲ್ಲಿ ಸಿಕ್ಕಿಹಾಕಿಕೊಳ್ಳದ, ನೀನು ಪವಿತ್ರನೂ ಅಲ್ಲ ಅಥವಾ ಬುದ್ಧಿವಂತನೂ ಅಲ್ಲ, ತನ್ನ ಕೆಲಸವನ್ನು ಪೂರೈಸಿದ ಒಬ್ಬ ಸಾಮಾನ್ಯ ಮನುಷ್ಯ.”

ಇದನ್ನೇ ಸರಳತೆ ಎಂದು ನಾನು ಹೇಳಬಯಸುವುದಿರಬೇಕು. ತಮ್ಮ ಬಗ್ಗೆ, ಅಂತಹ ವಿನಮ್ರತೆ, ನೈಜತೆ, ಸಂಯಮಿ ಹಾಗೂ ಪ್ರಾಮಾಣಿಕವಾಗಿರುವುದು. ವಿಶ್ವಾಸ, ಸಕಾರಾತ್ಮಕತೆ ಮತ್ತು ಸಂತೋಷ ಎನ್ನುವುದು ಸಂತೃಪ್ತಿ ಎಂಬ ಗೂಡಿನಲ್ಲಿ ವಾಸಿಸುವ ಪಕ್ಷಿಗಳು. ನೀವು ಕಠಿಣವಾದ ಜನ, ಪರಿಸ್ಥಿತಿ ಹಾಗೂ ಸಂದರ್ಭಗಳನ್ನು ಎದುರಿಸುತ್ತೀರಿ. ನಿಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಪ್ರತಿಕೂಲತೆ ನಿಮ್ಮನ್ನು ಸ್ವಾಗತಿಸುತ್ತದೆ. ಈಗೇನು? ನೀವು ವೈಫಲ್ಯವನ್ನು ಒಪ್ಪಿಕೊಳ್ಳುತ್ತೀರಾ, ಪ್ರಯತ್ನವನ್ನು ತ್ಯಜಿಸುತ್ತೀರಾ ಅಥವಾ ಒಂದೊಂದೇ ಹೆಜ್ಜೆ ಇಡುತ್ತಾ ಮುಂದುವರಿಯುತ್ತೀರಾ? ಪ್ರಯತ್ನವನ್ನು ತ್ಯಜಿಸದ ಆ ಒಂದು ಸರಳ ಹಾಗೂ ಪ್ರಾಮಾಣಿಕ ಶಿಸ್ತು, ನಿಮಗೆ ಶಾಂತಿ ಮತ್ತು ಸಕಾರಾತ್ಮಕತೆಯನ್ನು ನೀಡುತ್ತದೆ.

ಸಕಾರಾತ್ಮಕತೆಯಿಂದಿರುವುದು ಹಾಗೂ ಸಂತೋಷದಿಂದಿರುವುದು ಇವೆರಡೂ ಯಾವಾಗಲೂ ಒಂದೇ ಎಂದಲ್ಲ. ಕೆಲವು ಬಾರಿ ಇದರರ್ಥ, ನೀವು ಶಾಂತಿಯಿಂದ, ಸಮಾಧಾನದಿಂದ ಇರುವುದು ಎಂದು.

ಬೂಟಾಟಿಕೆ ಇಲ್ಲದೆ ಜೀವನ ನಡೆಸುವವನು ಸ್ವಾಭಾವಿಕವಾಗಿ ಸಕಾರಾತ್ಮಕವಾಗಿರುತ್ತಾನೆ. ನೀವು ನಿಮ್ಮ ಬಗ್ಗೆ ಪ್ರಾಮಾಣಿಕರಾಗಿದ್ದರೆ, ನಿಮಗೆ, ನೀವು ಏನು ಮಾಡಬಹುದು ಅಥವಾ ಮಾಡಲಾಗದು ಎಂಬುದರ ವಾಸ್ತವಿಕ ಅರಿವಿರುತ್ತದೆ. ಈ ವಾಸ್ತವಿಕತೆ ನಿಮ್ಮನ್ನು ಸಕಾರಾತ್ಮಕವಾಗಿರುವುದಕ್ಕೆ ಸಹಾಯಮಾಡುತ್ತದೆ. ಇದೇ ಸಕಾರಾತ್ಮಕತೆಯ ರಹಸ್ಯ.

ನೈಜವಾಗಿರಿ, ಸರಳವಾಗಿರಿ.

ಶಾಂತಿ.

ಸ್ವಾಮಿ.

Translated from: The Secret of Being Positive

Edited by: H. R. Ravi Kumar, Retd. Engineer, Shimoga.