ನಾನೀಗ ಆಶ್ರಮದಲ್ಲಿದ್ದೇನೆ. ಇದು ಗಿರಿಗಳು ಹಾಗೂ ಹರಿಯುವ ನದಿಯಿಂದ ಕೂಡಿದ ಸುಂದರ ತಾಣದಲ್ಲಿದೆ. ಹೆಚ್ಚು ಆಳವಿಲ್ಲದ, ಅಗಲವಾಗಿ ಹರಿಯುವ ನದಿ, ತಾನೇ ನಿರ್ಮಿಸಿಕೊಂಡ ಹಾದಿಯಲ್ಲಿ ಮುಕ್ತವಾಗಿ ತನ್ನನ್ನು ವ್ಯಕ್ತಪಡಿಸಿಕೊಂಡರೂ, ಅದರ ಆಳದ ಕೊರತೆ, ತನ್ನ ಭೌತಿಕ ಪೂರೈಕೆಯಲ್ಲಿ ವಿಸ್ತಾರವಾಗಿ ತನ್ನನ್ನು ಹರಡಿಸಿಕೊಂಡಿರುವ ಮನುಷ್ಯನ ಸ್ಥಿತಿಯನ್ನು ನೆನಪಿಸುತ್ತದೆ. ಈ ವಿಸ್ತಾರ, ಮನಃಶಾಂತಿಯ ಬಲಿಯಿಂದಾಗಿದೆ, ಹಾಗೂ ಅದು ಎಷ್ಟು ತೆಳುವಾಗಿ ಹರಡಿದೆ ಎಂದರೆ, ಅವನ ಪ್ರತ್ಯೇಕ ಅಸ್ತಿತ್ವಕ್ಕೆ ಆಳವೇ ಇಲ್ಲದಂತಾಗಿದೆ.

ಒಬ್ಬ ಓದುಗ, ಅವರ ನಿಸ್ವಾರ್ಥ ಕೊಡುಗೆ ಹಾಗೂ ಆಶ್ರಮದ ಸೇವೆಯನ್ನು ಹೊಗಳಿದರೆ ಉತ್ಪ್ರೇಕ್ಷೆಯಲ್ಲ, ಅವರ ಒಂದು ಪ್ರಶ್ನೆ ಹೀಗಿದೆ. ಹಲವರು ಈ ಪ್ರಶ್ನೆಯನ್ನು ಬೇರೆ ಬೇರೆ ರೀತಿಯಲ್ಲಿ ಈಗಾಗಲೇ ಕೇಳಿದ್ದಾರೆ.

ಪ್ರಭು, ನಮ್ಮ ಮನಸ್ಸು ಹಾಗೂ ಯೋಚನೆಗಳನ್ನು ನಿಯಂತ್ರಿಸುವ ಕಲೆಯ ಬಗ್ಗೆ ಇನ್ನಷ್ಟು ಮಾರ್ಗದರ್ಶನ ನೀಡಬಹುದೇ? ಹೊರ ಹಾಕಿದಂತೆಲ್ಲಾ ತಿರುಗುಬಾಣದ ಹಾಗೆ ಪುನಃ ಮರಳಿ ಬರುತ್ತದೆ. ಅದನ್ನು ನಿಯಂತ್ರಿಸಲು ಪ್ರಯತ್ನಿಸಿದರೆ ಮತ್ತಷ್ಟು ದಾಳಿ ಮಾಡಿ, ತಳಮಳ ಮತ್ತು ಹತಾಶೆ ಉಂಟುಮಾಡುತ್ತದೆ. ನಿಮ್ಮ ಹೇಳಿಕೆಯ ಪ್ರಕಾರ ಇದು ತುಂಬಾ ಕಠಿಣವಾದ ಕಾರ್ಯ, ಆದರೆ ಅಸಾಧ್ಯವಾದುದಲ್ಲ, ಹಾಗೂ ಒಮ್ಮೆ ನಿಯಂತ್ರಣಕ್ಕೆ ಬಂದರೆ ಆನಂದದಾಯಕವಾಗಿರುತ್ತದೆ ಎಂದು.

ಧಾರಣವೆಂದರೆ ಮನಸ್ಸನ್ನು ನಿಯಂತ್ರಿಸುವ ಕ್ರಿಯೆ. ಧ್ಯಾನವೆಂದರೆ ಆ ನಿಯಂತ್ರಣವನ್ನು ನಿರ್ವಹಿಸುವ ಕಲೆ. ಮನಸ್ಸಿನೊಂದಿಗೆ ಏಕತ್ವವನ್ನು ಸಾಧಿಸುವುದು, ಸಮಾಧಿ. ಮನಸ್ಸಿನ ನಿಯಂತ್ರಣದಿಂದ ಯೋಚನೆಗಳ ಹರಿವು ತನ್ನಷ್ಟಕ್ಕೆ ತಾನೇ ಕಡಿತಗೊಳ್ಳುತ್ತದೆ, ಹಾಗೂ ಯೋಚನೆಗಳ ಕಡಿತದಿಂದ ಮನಸ್ಸಿನಲ್ಲಿ ನಿಯಂತ್ರಣವಾಗುತ್ತದೆ; ಏಕೆಂದರೆ, ಮನಸ್ಸು ಮತ್ತು ಯೋಚನೆಗಳದ್ದು ಅವಿಭಾಜ್ಯ ಸಂಬಂಧ. ಇವೆಲ್ಲಾ ಕೇವಲ ಸೂಚಕ ವ್ಯಾಖ್ಯಾನಗಳು. ಧ್ಯಾನದ ಬಗ್ಗೆ ಇನ್ನಷ್ಟು ಸವಿಸ್ತಾರವಾಗಿ ಶೀಘ್ರದಲ್ಲಿ ಬರೆಯುತ್ತೇನೆ.

ಮನಸ್ಸಿನ ಶಾಂತಿಯನ್ನು ಸಾಧಿಸಲು, ಆರಂಭದಲ್ಲಿ ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯ ಆವಶ್ಯಕತೆಯಿದೆ. ನಿಮ್ಮ ಧ್ಯಾನದ ಗುಣಮಟ್ಟವನ್ನು ಉತ್ತಮಗೊಳಿಸಲು, ಧ್ಯಾನದ ಸಮಯದಲ್ಲಿ, ಮನಸ್ಸು ಅತ್ತಿತ್ತ ಹರಿದಾಡಿದಾಗ, ನಿಮ್ಮ ಧ್ಯಾನದ ವಿಷಯಕ್ಕೆ ಅಥವಾ ಯೋಚನೆಗೆ ಅದನ್ನು ಪುನಃ ಮರಳಿ ತನ್ನಿ. ಈ ಕೆಲಸವನ್ನು ಅತಿಯಾಗಿ ಶ್ರಮ ಉಪಯೋಗಿಸದೆ, ಸೌಮ್ಯವಾಗಿ ಮಾಡಬೇಕು. ಮನಸ್ಸನ್ನು ನಿಯಂತ್ರಿಸುವ ಅನಧಿಕೃತ ಪ್ರಯತ್ನ ಹಾಗೂ ಶ್ರಮ, ಮನಸ್ಸನ್ನು ಇನ್ನಷ್ಟು ಚಂಚಲವಾಗಿಸುತ್ತದೆ.

ಏಕಾಗ್ರತೆಯ ಕೊರತೆಯನ್ನುಂಟುಮಾಡುವ ಹಾಗೂ ಆಯಾಸದಾಯಕವಾಗಿಸುವ ದೀರ್ಘಾವಧಿಯ ಧ್ಯಾನವನ್ನು ಮಾಡುವುದಕ್ಕಿಂತ ಅದನ್ನು ಹಲವು ಚಿಕ್ಕದಾದ, ಚೊಕ್ಕದಾದ ಧ್ಯಾನದ ಅವಧಿಯನ್ನಾಗಿಸಿಕೊಳ್ಳುವುದು ಸೂಕ್ತ. ತೀಕ್ಷ್ಣವಾದ ಏಕಾಗ್ರತೆಯನ್ನು ಉಳಿಸಿಕೊಳ್ಳಬೇಕು, ಹಾಗೂ ಧ್ಯಾನದ ಅವಧಿಯನ್ನು ನಿಯಮಿತವಾಗಿ ಹೆಚ್ಚಿಸಬೇಕು. ನನಗೆ ಸ್ವಲ್ಪ ಸಮಯಾವಕಾಶ ಕೊಡಿ, ಸಾಧಕರಿಗೆ ಧ್ಯಾನದ ಚೌಕಟ್ಟನ್ನು ದಾಖಲಿಸಬೇಕೆಂಬುದು ನನ್ನ ಆದ್ಯತೆಯಾಗಿದೆ. ನಾನು ಅದರಲ್ಲಿ, ಪೂರ್ವಾಪೇಕ್ಷಿತಗಳು, ಕ್ರಮಿಸುವ ದಾರಿ, ಅಭ್ಯಾಸಗಳು, ತೊಡರುಗಳು, ಮೈಲಿಗಲ್ಲುಗಳು ಹಾಗೂ ಫಲಿತಾಂಶಗಳನ್ನು ವಿವರವಾಗಿ ಉಲ್ಲೇಖಿಸುತ್ತೇನೆ. ಅಲ್ಲಿಯವರೆಗೂ, ಇದು ತಿಳಿದಿರಲಿ; ಯೋಚನೆಗಳು ನಿಯಮಾಧೀನ ಮನಸ್ಸಿನ ಉತ್ಪನ್ನಗಳು. ಮನಸ್ಸಿನ ಸಹಜ ಸ್ಥಿತಿ, ಶುದ್ಧ ಆನಂದ, ಅಂದರೆ ವಾಸ್ತವವಾಗಿ ಪ್ರಾಯಶಃ ಬುದ್ಧಿ ರಹಿತವಾಗಿರುವುದು.

ಕೊನೆ ಮುಟ್ಟುವ ತನಕ ಪ್ರಯತ್ನ ಬಿಡಬೇಡಿ. ನಿಮ್ಮ ಪಥದಲ್ಲಿ ದೃಢವಾಗಿ ಮುಂದುವರಿದಿದ್ದೇ ಆದರೆ, ಪ್ರಕೃತಿಯು ನಿಮ್ಮನ್ನು ವಿಸ್ಮಯ ಪಡಿಸುತ್ತದೆ. ಹೇಗೆ? ತಿಳಿಯಲು ಧ್ಯಾನಿಸಿ!

ಶಾಂತಿ,

ಸ್ವಾಮಿ.

Translated from: Meditation and Thoughts

Edited by: H. R. Ravi Kumar, Retd. Engineer, Shimoga.

Painting inspired by(copied from😛) https://youtu.be/Ljgxn85ZhR8

Pay Anything You Like

Rekha Om

Avatar of rekha om
$

Total Amount: $0.00