ಕಳೆದ ವಾರ ತುಂಬಾ ಚಟುವಟಿಕೆಗಳಿಂದ ಕಳೆಯಿತು. ನಾನು ಸಾಕಷ್ಟು ಜನರನ್ನು ಭೇಟಿಯಾದೆ, ಪ್ರವಚನಗಳನ್ನು ನೀಡಿದೆ, ಹಾಗೂ ಕೀರ್ತನೆಗಳನ್ನು ಆನಂದಿಸಿದೆ. ದಿನನಿತ್ಯದ ಜನರ ಆಗಮನ ಹಾಗೂ ಅವರಿಂದ ಗಂಟೆಗಟ್ಟಲೆ ಭಜನೆಗಳನ್ನು, ನಾನು ಭಾವ ಪರವಶನಾಗಿ ಆಹ್ಲಾದಿಸಿದೆ. ನಾನು ಅವರ ಭಕ್ತಿ, ಹಾಗೂ ಪ್ರೀತಿಯನ್ನು ನೋಡಿ ಭಾವುಕನಾದೆ. ಸಂಗೀತ ವಾದ್ಯಗಳ ಜೊತೆಗೂಡಿ, ಅವರು ಆಳವಾದ, ಗೊಗ್ಗರು ಧ್ವನಿ ಹಾಗೂ ಇಂಪಾದ ಕಂಠಲ್ಲಿ ಹಾಡಿದಾಗ, ಆನಂದಪರವಶತೆಯಿಂದ, ದೈವಿಕ ಪ್ರೇಮವು, ಕಣ್ಣೀರು, ನಗು, ರೋಮಾಂಚನ ಹಾಗೂ ಕಂಪನಗಳಾಗಿ ಅಡೆತಡೆಯಿಲ್ಲದೆ ಅಭಿವ್ಯಕ್ತವಾಯಿತು.

ಈಗ ನಾನು, ನನ್ನ ದೇಹ ಹಾಗೂ ಪ್ರಾಣವನ್ನು ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡು, ನನ್ನ “ಏಕಾಂತ”ದ ಒಡನಾಟದಲ್ಲಿ ಆನಂದ ಹೊಂದಲು ಹೊರಟಿದ್ದೇನೆ. ಭಕ್ತಿಪೂರ್ವಕ ಸೇವೆ ಅಥವಾ ಭಕ್ತಿಯ ಪರಿಕಲ್ಪನೆಯ ಬಗ್ಗೆ ವಿಷದೀಕರಿಸಲು ನಾನು ಇಚ್ಛಿಸುತ್ತೇನೆ. ಭಕ್ತಿಯ ಮಾರ್ಗ ಧ್ಯಾನದಷ್ಟು ಕಠಿಣವಲ್ಲ. ಆದಾಗ್ಯೂ, ಕೇವಲ ಭಕ್ತಿಯೊಂದರಿಂದಲೇ ಸತ್ಯದ ಅನುಭೂತಿ ಪಡೆಯಬೇಕಾದರೆ, ಸಂಪೂರ್ಣ ಶರಣಾಗತಿಯ ಅಗತ್ಯವಿದೆ. ಭಕ್ತಿಯ ಜೊತೆ ಧ್ಯಾನವನ್ನು ಒಗ್ಗೂಡಿಸಿಕೊಂಡರೆ, ಭಕ್ತಿ, ತ್ವರಿತವಾಗಿ ಅಭಿವೃದ್ಧಿಗೊಳ್ಳುತ್ತದೆ, ಹಾಗೂ ಅದ್ಭುತವಾದ ಫಲಿತಾಂಶವನ್ನು ನೀಡುತ್ತದೆ.

ಲೌಕಿಕ ವಸ್ತು ವಿಷಯಗಳಿಂದ ಮನಸ್ಸನ್ನು ದೂರೀಕರಿಸಲು, ಹಾಗೂ ಅಂತಃಪ್ರಜ್ಞೆಯನ್ನು ಕೇಂದ್ರೀಕರಿಸಲೆಂದೇ ನವವಿಧ ಭಕ್ತಿಯ ವಿನ್ಯಾಸ ಮಾಡಲಾಗಿದೆ. ಆದರೆ ಈ ಪರಾಕಾಷ್ಠ ಸ್ಥಿತಿಯು ಸುಲಭವಾಗಿ ಸಿಗುವುದಿಲ್ಲ. ಒಂದು ಅಸ್ಥಿರ ಮನಸ್ಸು, ನಿಮ್ಮನ್ನು ಪ್ರಕ್ಷುಬ್ಧ ಪ್ರವೃತ್ತಿಗಳಿಗೆ ಬಲಿಪಶುವನ್ನಾಗಿಸಿ, ಭಕ್ತಿಪೂರ್ವಕ ಸೇವೆಯನ್ನು ಸಲ್ಲಿಸಲು ಬೇಕಾಗುವ ಶಾಂತಿ ಹಾಗೂ ನಿಶ್ಚಲತೆಯನ್ನು ಹಾಳುಮಾಡುತ್ತದೆ.

ಮೂರು ವಿಧದ ಭಕ್ತರಿದ್ದಾರೆ ಅವರು:

ಭಾವರಹಿತ ಭಕ್ತ:
ಈ ಭಕ್ತ, ಸಮಾಜವಾದಿ. ಅವನು/ಅವಳಿಗೆ, ಭಗವಂತ ಅಥವಾ ಜನಸೇವೆ ಮಾಡುವ ಯಾವುದೇ ಬಯಕೆಯಿಲ್ಲ. ಇವನು ಧರ್ಮವನ್ನು ತಪ್ಪಾಗಿ, ಅಧ್ಯಾತ್ಮವೆಂದು ಪರಿಗಣಿಸಿದ್ದಾನೆ. ದುರಾಸೆ ಹಾಗೂ ಲಾಭದ ಆಮಿಷಕ್ಕೊಳಗಾಗಿ, ಈ ಭಕ್ತ, ದೇವಸ್ಥಾನಗಳನ್ನು ಕಟ್ಟುವುದರಲ್ಲಿ, ತಮ್ಮ ಧಾರ್ಮಿಕ ಸಂಸ್ಥೆಗಳಿಗೋಸ್ಕರ ಹೆಚ್ಚು ಜಾಗಗಳನ್ನು ಸ್ವಾಧೀನಪಡಿಸಿಕೊಳ್ಳುವುದರಲ್ಲಿ, ಇನ್ನಷ್ಟು ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದರಲ್ಲಿ ಹಾಗೂ ಆಡಂಬರದ ಉತ್ಸವಗಳನ್ನು ಆಚರಿಸುವುದರಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾನೆ.ಅವನು ಯಾವುದಾದರೂ ದೇವಸ್ಥಾನ ಮಂಡಳಿಯ ಸದಸ್ಯನಾಗಿ, ಲೌಕಿಕ ಚಟುವಟಿಕೆಗಳಲ್ಲಿ ವ್ಯಸ್ತನಾಗಿರುತ್ತಾನೆ. ಇವನ ಹಾಗೇ ಮನಃಸ್ಥಿತಿ ಹೊಂದಿರುವವರು, ಇವನನ್ನು ಒಬ್ಬ ಶ್ರೇಷ್ಠ ಭಕ್ತನೆಂದು ಪರಿಗಣಿಸುತ್ತಾರೆ. ಹಾಗೂ ಅವನೂ ಸಹ ತನ್ನನ್ನು ಒಬ್ಬ ಉದ್ದಾಮ ಭಕ್ತ‌ನೆಂದೇ ನಂಬುತ್ತಾನೆ.

ಒಂದು ಭ್ರಷ್ಟ ಜೀವನ ಜೀವಿಸುತ್ತಿದ್ದರೂ, ಪೂಜೆಗಳಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ನಿರೀಕ್ಷಿಸುತ್ತಾರೆ. ವಾಸ್ತವವಾಗಿ ಈ ತರಹದ ಭಕ್ತರಿಗೆ ತಮ್ಮ ವಿಕಾರಗಳನ್ನು ಬಿಟ್ಟುಬಿಡಲು ಸಾಧ್ಯವಾಗುತ್ತಿಲ್ಲ. ಅವರ ಕಾಮುಕ ಕಣ್ಣುಗಳು ಪ್ರತೀ ಹೆಂಗಸರನ್ನು ಕಾಮದ ವಸ್ತುವಾಗಿ ನೋಡುತ್ತದೆ. ಅಹಂಕಾರದ ಮದದಿಂದ, ಸಣ್ಣಪುಟ್ಟ ಪ್ರತಿರೋಧಕ್ಕೂ ಕಿಡಿಕಿಡಿಯಾಗುತ್ತಾರೆ. ಸಾಮಾಜಿಕ-ಧಾರ್ಮಿಕ ಕ್ಷೇತ್ರದಲ್ಲಿ ಮಾಡುವ ತಮ್ಮ  ಮೋಸಗಾರಿಕೆಯ ಸ್ವಭಾವದಿಂದಾಗಿ, ತಮ್ಮನ್ನು ತಾವು ಎಲ್ಲರಿಗಿಂತಲೂ ಶ್ರೇಷ್ಠ ಭಕ್ತರೆಂದು ಪರಿಗಣಿಸುತ್ತಾರೆ.

ಕೆಲವೊಮ್ಮೆ, ಸ್ವತಃ ತಮ್ಮನ್ನು ಹಾಗೂ ಬೇರೆಯವರನ್ನು ಒಂದೆರಡು ಭಜನೆಗಳ‌ ಮೂಲಕ ಮನರಂಜಿಸುತ್ತಾರೆ. ಇಂಥವರು, ಭಕ್ತ ಬಿಟ್ಟು ಬೇರೆಲ್ಲಾ ಆಗಿರುತ್ತಾರೆ. ಬೇರೆಯವರು ತಮ್ಮ ಚರಣ ಸ್ಪರ್ಶ ಮಾಡಿದಾಗ ತುಂಬಾ ಸಂತೋಷ ಪಡುತ್ತಾರೆ, ಹಾಗೂ ತಾವು ಸಿದ್ಧ ಪುರುಷರಿಗೇನು ಕಮ್ಮಿ ಎನ್ನುವಂತೆ ಟೊಳ್ಳು ಆಶೀರ್ವಾದಗಳನ್ನು ಸುರಿಸುತ್ತಾರೆ. ಉಪದೇಶಗಳನ್ನು ನೀಡುವುದರಲ್ಲಿ ಪ್ರಾಮಾಣಿಕರು, ಅದರಲ್ಲೂ ಆಧ್ಯಾತ್ಮದ ಬಗ್ಗೆ, ಮತ್ತು ತಮ್ಮ ಅಭಿಪ್ರಾಯಗಳನ್ನು ನಿಮ್ಮ ಗಂಟಲಲ್ಲಿ ತುರುಕಲು ಪ್ರಯತ್ನಿಸುತ್ತಾರೆ.

ಇಲ್ಲಿಯವರೆಗೂ, ಯಾವುದೇ ಮೆರವಣಿಗೆಯ ಮಧ್ಯೆ ಭಗವಂತ ಪ್ರಕಟವಾಗಿಲ್ಲ. ಇಲ್ಲಿಯತನಕ, ಕಲ್ಲಿನ ವಿಗ್ರಹದಿಂದ ಅವನು ಹೊರಹೊಮ್ಮಿಲ್ಲ. ಅವನು ಕಲ್ಲಿನಲ್ಲೂ ಇದ್ದಾನೆ, ಆದರೆ ಕಲ್ಲೇ ಅವನಲ್ಲ. ಈ ವರ್ಗಕ್ಕೆ ಸೇರಿದ ಭಕ್ತರು ಒಂದು ದೊಡ್ಡ ಭ್ರಮೆಯಲ್ಲಿ ಜೀವಿಸುತ್ತಿರುತ್ತಾರೆ. ಯಾರಿಂದಲೂ ಸಹ ಇವರ ಮನವೊಲಿಸಲು ಆಗುವುದಿಲ್ಲ, ಆದ್ದರಿಂದ ಕೇವಲ ದೈವದ ಹಸ್ತಕ್ಷೇಪ, ಅಂದರೆ ದೇವರ ಕೃಪೆಯೊಂದೇ ಇವರನ್ನು ಕಾಪಾಡಬಹುದು.

ಎರವಲಾಗಿ ಬಂದ ಭಾವನೆ:
  ಅಗಾಧ ಸಂಖ್ಯೆಯ ಭಕ್ತರು ಈ ವರ್ಗಕ್ಕೆ ಸೇರುತ್ತಾರೆ. ಈ ಭಕ್ತ ತನ್ನ ಸತ್ಯವನ್ನು ಇನ್ನೂ ಕಂಡುಕೊಂಡಿಲ್ಲ. ಅವರ ಪಾಲನೆ ಹಾಗೂ ಪರೋಕ್ಷ ಜ್ಞಾನ ಅವರನ್ನು ಈಗಿರುವಂತೆ ರೂಪಿಸಿದೆ.  ಬೇರೆಯವರ ಸಿದ್ಧಾಂತದಿಂದ ಹಿಡಿದು, ಪೂಜೆಯ ವಿಧಾನ, ಸ್ತುತಿಗಳು, ಭಜನೆಗಳು, ಪ್ರತಿಯೊಂದೂ ಅವರು ಎರವಲು ಪಡೆದದ್ದು. ದುರದೃಷ್ಟವಶಾತ್, ಇದೆಲ್ಲಾ ಯಾರಿಂದ ಬಂದಿದೆಯೋ, ಅವರಿಗೂ ಕೂಡ ಯಾವುದೇ ರೀತಿಯ ನೇರ ಅನುಭವವಾಗಿರುವುದಿಲ್ಲ.

ಈ ಬೋಧಕರು ಬೇರೆ ಯಾರಿಂದಲೋ ಕೇಳಿಸಿಕೊಂಡಿರುತ್ತಾರೆ, ಅಥವಾ ಯಾವುದೋ ಹಳೆಯ ಕಾಲಕ್ಕೆ ಅನ್ವಯಿಸುವ ಪುಸ್ತಕಗಳನ್ನು ಓದಿರುತ್ತಾರೆ. ಖಂಡಿತವಾಗಿಯೂ, ಅದರ ನಿಗೂಢತೆಯನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿರುತ್ತಾರೆ, ಹಾಗೂ ಏನನ್ನು ಕೇಳಿಸಿಕೊಂಡಿರುತ್ತಾರೋ ಅದನ್ನು ಹಾಗೆಯೇ ಸ್ವೀಕರಿಸಿರುತ್ತಾರೆ.

ಈ ಭಕ್ತ ತನ್ನ ನಿತ್ಯ ಕ್ರಿಯೆಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತಾನೆ. ಅವನು ಶಿಲೆಯಲ್ಲಿ ಭಗವಂತನಿರುವನೆಂದು ನಂಬುತ್ತಾನೆ! ಒಂದು ಮಗುವಿನಲ್ಲಿ, ಕಷ್ಟದಲ್ಲಿರುವವನಲ್ಲಿ, ನಾಯಿಯಲ್ಲಿ, ಅಥವಾ ಒಂದು ಜಿರಳೆಯಲ್ಲಿ ತನ್ನ ಭಗವಂತನನ್ನು ಕಾಣಲು ವಿಫಲನಾಗುತ್ತಾನೆ. ಬೇರೆಯವರ ನೋವು ಅರ್ಥವಾಗುವುದಿಲ್ಲ; ಸಹಾನುಭೂತಿ ಹಾಗೂ ದಯೆ ಎಲ್ಲೂ ಕಾಣಸಿಗುವುದಿಲ್ಲ. ಮನುಜನಿಗೆ ಅರ್ಥವಾಗದ ಯಾವುದೋ ಒಂದು ಕಾರಣವಿರಬಹುದು, ಗೊತ್ತಿಲ್ಲ, ಅವನು ನಂಬಿ ಬಿಟ್ಟಿದ್ದಾನೆ, ತನ್ನ ಟೊಳ್ಳು ಬಾಹ್ಯ ಆರಾಧನೆಯಿಂದ ಭಗವಂತ ಸಂತೃಪ್ತನಾಗಿದ್ದಾನೆಂದು. ಅವನಿಗೆ ದೇವರ ಮನೆಯನ್ನು ಸ್ವಚ್ಛ ಮಾಡುವುದರ ಬಗ್ಗೆ ಹೆಚ್ಚು ಕಾಳಜಿಯೇ ಹೊರತು, ತನ್ನೊಳಗೆ ಒಂದು ಉತ್ಕೃಷ್ಟವಾದದ್ದನ್ನು ನಿರ್ಮಿಸುವುದರಲ್ಲಲ್ಲ.

ಹಲವಾರು ಧರ್ಮದ, ಅನೇಕ ಬೋಧಕರು ಈ ವರ್ಗದಲ್ಲಿ ಬರುತ್ತಾರೆ. ಈ ಭಕ್ತ, ತನ್ನ ಅನುಕೂಲಕ್ಕೆ ತಕ್ಕಂತೆ ನೈತಿಕತೆಯನ್ನು ಅಳವಡಿಸಿಕೊಳ್ಳುತ್ತಾನೆ, ಹಾಗೂ ಬೇಕಾದಾಗ ತೊರೆಯುತ್ತಾನೆ. ಬಯಕೆಗಳ ಅಡಿಯಾಳಾಗಿ, ಕೋಪ ಮತ್ತು ಅಹಂಕಾರದ ನಿಯಂತ್ರಣದಲ್ಲಿ ಸದಾ ಇರುತ್ತಾನೆ.

ಮೊದಲಿನವನಿಗಿಂತ ಇವನು ಉತ್ತಮ. ಇವನಿಗೆ ಸಾಕ್ಷಾತ್ಕಾರಕ್ಕೆ ಸ್ವಲ್ಪವಾದರೂ ಅವಕಾಶವಿದೆ, ನೈತಿಕತೆಯನ್ನು ತನ್ನ ಜೀವನದ ಬುನಾದಿಯನ್ನಾಗಿಸಿಕೊಂಡರೆ ಹಾಗೂ ತನ್ನ ಜೀವನವನ್ನು ಸ್ವಯಂ ಶುದ್ಧೀಕರಣ ಮಾಡಿಕೊಂಡ ಪಕ್ಷದಲ್ಲಿ ಮಾತ್ರ.  ತದನಂತರ, ಹೃದಯದ ಮೂಲೆಗಳಿಂದ ಸಹಜ ಶುದ್ಧ ಭಾವನೆ ಹೊರಹೊಮ್ಮುವುದಕ್ಕೆ ಶುರುವಾಗುತ್ತದೆ, ಹಾಗೂ ಅವನನ್ನು ಉನ್ನತಿಗೊಳಿಸುತ್ತದೆ.

ಸ್ವಂತ ಭಾವ:
 ಈ ಶ್ರೇಣಿಯ ಭಕ್ತರು ಅತ್ಯಂತ ಶ್ರೇಷ್ಠರು ಹಾಗೂ ತುಂಬಾ ವಿರಳ. ನೀವು ನಿಮ್ಮ ಸತ್ಯಾನ್ವೇಷಣೆಯನ್ನು ಮಾಡಿಕೊಂಡಿದ್ದೀರಿ.  ತುಳಸೀದಾಸರು, ಮೀರಾ, ಸೂರದಾಸರು, ಚೈತನ್ಯ ಮಹಾಪ್ರಭುಗಳ ಹಾಗೆ ನೀವೂ ಆಂತರಿಕವಾಗಿ ಪಯಣಿಸಿದ್ದೀರಿ. ನೀವು ನಿಮ್ಮ ಭಗವಂತನ ಬಾಹ್ಯ ಪೂಜೆಯನ್ನು ಮಾಡುತ್ತೀರಿ. ಆದರೇ, ನಿಮ್ಮದೇ ಭಾವದಲ್ಲಿ. ನಿಮ್ಮ ಆಂತರಿಕ ಪೂಜೆ ನೋಡುಗರಿಗೆ ಬಹಿರಂಗ ಪೂಜೆಯ ಹಾಗೆ ಕಾಣಿಸುತ್ತದೆ. ಆದರೆ, ಇದರಿಂದ ಪಂಥಗಳು ನಿರ್ಮಾಣವಾಗಿ, ಸಾಧಕರಿಗೆ ಗೊಂದಲಗಳು ಇನ್ನೂ ಹೆಚ್ಚಾಗುತ್ತದೆ.

ನೀವು, ಸಾಂಪ್ರದಾಯಿಕ, ಬಾಹ್ಯ ಪೂಜಾ ವಿಧಾನಗಳನ್ನು ಮೀರಿರುತ್ತೀರಿ. ಉನ್ನತವಾದ ಸದ್ಗುಣಗಳಿಂದ ಕೂಡಿದ ಜೀವನ ಹಾಗೂ ಅದಕ್ಕಿಂತಲೂ ಹೆಚ್ಚಿನ ಪ್ರಾಮಾಣಿಕ ನಡುವಳಿಕೆಯಿಂದ ನೀವು ನಿಮ್ಮನ್ನು ಪರಿಶುದ್ಧರನ್ನಾಗಿಸಿರುವಿರಿ. ಸಾರಾಂಶ, ನೀವೇ ಸ್ವತಃ ದೇವರಾಗಿರುವಿರಿ. ಮಗುವಿನಂತಹ ಮುಗ್ಧತೆ ಹಾಗೂ ಪ್ರಾಪಂಚಿಕ ವ್ಯವಹಾರದ ಬಗ್ಗೆ ಉದಾಸೀನರಾಗಿ ನೀವು ನಿಮ್ಮ ಸಮಯವನ್ನು ಏಕಾಂತದಲ್ಲಿ ಕಳೆಯುವಿರಿ. ಏಕಾಂತದಲ್ಲಿದ್ದಾಗಲೂ ಸಹ, ನೀವು ನಿಮ್ಮ ಇಷ್ಟದೇವರ ಸಂಗದಲ್ಲಿರುವಿರಿ. ಮತ್ತು, ಜನಜಂಗುಳಿಯ ಮಧ್ಯದಲ್ಲಿದ್ದರೂ, ನೀವು ನಿಮ್ಮ ದೇವರ ಸಂಗಡ ಆನಂದದಿಂದ ಒಂಟಿಯಾಗಿರುತ್ತೀರಿ.

ಬಯಕೆಗಳೆಲ್ಲಾ ನಿಮ್ಮನ್ನು ಬಿಟ್ಟುಬಿಟ್ಟಿದೆ, ಹಾಗಾಗಿ ಎಲ್ಲಾ ವಿಕಾರಗಳು ಕೂಡ, ಬೆಳಕಿದ್ದಲ್ಲಿ ಕತ್ತಲೆಯಿರಲು ಸಾಧ್ಯವೇ? ನೀವೇ ಆ ಬೆಳಕು. ಪ್ರೀತಿ, ಶಾಂತಿ, ಆನಂದ ಹಾಗೂ ಜ್ಞಾನದ ಬೆಳಕು. ನೀವು ನಿಮ್ಮ ಭಗವಂತನನ್ನು ಕಂಡುಕೊಂಡಿರುವುದರಿಂದ, ನಿಮ್ಮಲ್ಲಿ ಉತ್ಕಟ ವೈರಾಗ್ಯವುಂಟಾಗಿದೆ – ಆತ್ಮಸಾಕ್ಷಾತ್ಕಾರದಲ್ಲಿ ಸಹಜವಾಗಿ ಆಗುವ ಉಪ ಉತ್ಪನ್ನ. ನೀವು ಅದ್ಭುತ ಕಾರ್ಯಗಳನ್ನು ನೆರವೇರಿಸಲು ಸಿದ್ದರಾಗಿರುವಿರಿ, ಹಾಗೂ ಕೇವಲ ನಿಮ್ಮ ಉಪಸ್ಥಿತಿಯು ಈ ಮೊದಲು ತಿಳಿಸಿದ ಭಕ್ತರನ್ನು, ಹಾಗೂ ನಿಮ್ಮ ಬಳಿಗೆ ಬರುವ ಹಲವರನ್ನು ಪರಿವರ್ತಿಸುತ್ತದೆ.

ಒಬ್ಬ ವಿದ್ಯಾರ್ಥಿಗೆ ಈಗಾಗಲೇ ಉತ್ತೀರ್ಣವಾದ ತರಗತಿಯ ಪುಸ್ತಕಗಳಿಂದ ಏನೂ ಉಪಯೋಗವಿಲ್ಲ, ಹಾಗೆಯೇ, ನೀವು ಸಂಪ್ರದಾಯಗಳನ್ನು ಹಾಗೂ ಪುಸ್ತಕದಲ್ಲಿರುವ ಆಚರಣೆಗಳನ್ನು ಮೀರಿ ಬೆಳೆದಿದ್ದೀರಿ. ಇಲ್ಲಿಯ ತನಕ ಯಾರು ತಾನೇ ಸಂಪ್ರದಾಯಗಳಿಂದ ದೇವರನ್ನು ಕಂಡುಕೊಂಡಿದ್ದಾರೆ?

 ಭಕ್ತಿ ಎನ್ನುವುದು ಒಂದು ಅನುರಕ್ತಿ ಪೂರ್ವಕ ಸೇವೆ, ಹುಚ್ಚು ಆಚರಣೆಗಳಲ್ಲ. ಎರವಲು ಭಾವದಿಂದ ಪ್ರಾರಂಭಿಸಿ ತೊಂದರೆಯಿಲ್ಲ. ನಿರಂತರ ಸ್ವಯಂ ಶುದ್ಧೀಕರಣ ಹಾಗೂ ಬದ್ಧತೆ ತುಂಬಿದ ಜೀವನದಿಂದ ಅತಿಶೀಘ್ರದಲ್ಲಿಯೇ ನಿಮ್ಮ ಸ್ವಾಭಾವಿಕ ಭಾವವನ್ನು ಅರಿತುಕೊಳ್ಳುವಿರಿ. ಅವಿರತ ವೈರಾಗ್ಯ ಹಾಗೂ, ಪ್ರತಿಯೊಂದು ಪರಿಸ್ಥಿತಿಯಲ್ಲಲ್ಲದಿದ್ದರೂ ಬಹುತೇಕದರಲ್ಲಿ ಸ್ಥಿತಪ್ರಜ್ಞೆತೆಯಿಂದಿರುವುದು ಶ್ರೇಷ್ಠ ಭಕ್ತನ ಚಿಹ್ನೆಗಳು. ನಿಮ್ಮ ಬಯಕೆಗಳನ್ನು ನಿರಾಯಾಸವಾಗಿ ಪರಿತ್ಯಜಿಸಿದಾಗ, ಅವು ಪುನಃ ಮರಳುವುದಿಲ್ಲ, ಅಂದರೆ, ಈಗ ನಿಮ್ಮ ಇಷ್ಟ ದೇವರ ದರ್ಶನ ಸನ್ನಿಹಿತವಾಗಿದೆ ಎಂದರ್ಥ.

ನೀವು ತೀವ್ರವಾಗಿ ಸ್ತುತಿಸಬಹುದು ಅಥವಾ ಕ್ಷಮೆಯಾಚಿಸಬಹುದು, ಭಿಕ್ಷುಕನಾದರೆ ನಿಮಗೆ ಬರೀ ಚಿಲ್ಲರೆ ದೊರೆಯುತ್ತದೆ. ಸ್ವೀಕರಿಸಲು ಅರ್ಹರಾಗಿ, ಹಾಗೂ ನೀವು ಕೇಳಿದ್ದೆಲ್ಲಾ ನಿಮ್ಮ ಮಡಿಲಲ್ಲಿ ಬಂದು ಬೀಳುವುದು; ಅಕ್ಷರಶಃ ಅಲ್ಲ, ಸಧ್ಯ.

ಭಕ್ತಿಯ ಆಚರಣೆಯನ್ನು, ಪರಿಶುದ್ಧತೆ, ಶರಣಾಗತಿ ಹಾಗೂ ವೈರಾಗ್ಯದಿಂದ ಮಾಡಿದರೆ, ನಿಮ್ಮ ಎಲ್ಲಾ ಸಂಕೋಲೆಗಳೂ ಕಡಿದು ಹೋಗುತ್ತದೆ. ಆದಾಗ್ಯೂ, ನಿಮಗೆ ಪ್ರಾರಬ್ಧಕರ್ಮದಿಂದ ಬಿಡುಗಡೆ ಸಿಗುವುದಿಲ್ಲ. ಆದರೆ ನೀವು ಕ್ಷೋಭೆಗೆ ಒಳಗಾಗುವುದಿಲ್ಲ. ಕರ್ಮದ ಕಾನೂನಿನಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ನಿಮ್ಮ ಸ್ವಂತ ಭಾವದ ಮನವರಿಕೆಯಾದ ನಂತರ ನೀವು ಕಟ್ಟಕಡೆಯ ಹಂತವನ್ನು ತಲುಪುವಿರಿ – ಪರಾಭಕ್ತಿ. ಇದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.

ಅಂದರೆ, ನೀವು ನಿಮ್ಮ ಬಯಕೆಗಳನ್ನೆಲ್ಲಾ ಕೊಂದುಹಾಕಿ, ಸದಾಕಾಲ ದೇವರ ನಾಮವನ್ನು ಜಪಿಸಬೇಕೇ, ಅಥವಾ ಪ್ರಾಪಂಚಿಕ ಜೀವನವನ್ನೇ ತ್ಯಜಿಸಬೇಕೇ? ನೀವು ಈ ನಿರ್ಣಯಕ್ಕೆ ಬಂದಿದ್ದರೆ, ನಾನು ಇದಕ್ಕಿಂತ ಹೆಚ್ಚು ಕೆಟ್ಟದಾಗಿ ತಿಳಿಯಪಡಿಸಲು ಸಾಧ್ಯವಿಲ್ಲ ಅಥವಾ ನೀವು ಇದಕ್ಕಿಂತ ಹೆಚ್ಚು ತಪ್ಪಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಗಾಳಿಯನ್ನು ಕೊಲ್ಲುವುದಕ್ಕೆ ಹೇಗೆ ಸಾಧ್ಯ? ನೀವು ಬಯಕೆಗಳನ್ನು ನಿಗ್ರಹ ಮಾಡುವುದಕ್ಕೆ ಅಥವಾ ಕೊಲ್ಲುವುದಕ್ಕೆ ಆಗುವುದಿಲ್ಲ, ಹಾಗೆ ಮಾಡಿದರೆ ನೀವು ಜ್ವಾಲಾಮುಖಿಯ ಹಾಗೆ ಸ್ಫೋಟಿಸುತ್ತೀರಿ. ಜೀವನ ನಿಮಗೆ ನೀಡುತ್ತಿರುವುದನ್ನು ಆನಂದಿಸಿರಿ, ನೈತಿಕತೆಯ ಪರಿಧಿಯೊಳಗೆ.

ಆತ್ಮ ಶುದ್ಧಿಗಾಗಿ ನಿರಂತರ ಪ್ರಯತ್ನಶೀಲರಾಗಿರಿ. ಇದರ ಜೊತೆಗೆ, ನಿಮಗೆ ದೇವರಲ್ಲಿ ನಂಬಿಕೆಯಿದ್ದರೆ, ಹಾಗೂ ನೀವು ಶರಣಾಗತಿಯನ್ನು ಅಭ್ಯಸಿಸಬಹುದಾದರೆ ಮಾತ್ರ ಭಕ್ತಿಯನ್ನೂ ಪ್ರಾರಂಭಿಸಿ. ಬಹಳ ವಿರಳವಾಗಿ ಭಕ್ತಿಯನ್ನು ಮೊದಲ ನೋಟದಲ್ಲೇ ಆಗುವ ಪ್ರೇಮಕ್ಕೆ ಹೋಲಿಸಬಹುದು. ಈ ನಂಟು ಹೇಗೆಂದರೆ, ನಿಮ್ಮ ಭಗವಂತನ ಮೇಲಿನ ಪ್ರೀತಿ ಹಾಗೂ ಸಂಬಂಧ ಕಾಲಕ್ರಮೇಣ ಬೆಳೆಯುತ್ತದೆ. ನಿಮಗೆ ಶರಣಾಗಲು ಆಗದಿದ್ದರೆ, ಭಕ್ತಿಮಾರ್ಗ ನಿಮಗಲ್ಲ. ಹಾಗಿದ್ದಲ್ಲಿ ನೀವು ಧ್ಯಾನದ ಮಾರ್ಗದಲ್ಲಿ ನಡೆಯಬಹುದು. ಆದರೆ ಕಠಿಣವಾದ ಪರಿಶ್ರಮಕ್ಕೆ ತಯಾರಾಗಿರಿ, ಧ್ಯಾನ ಮಾರ್ಗದಲ್ಲಿ ಕಠಿಣವಾದ ಪ್ರಯತ್ನದಿಂದ ಮಾತ್ರ ಗಮನಾರ್ಹ ಫಲಿತಾಂಶ ಬರುವುದು.
 ಬಯಕೆಗಳ ನೈಜ ಸ್ವಭಾವವನ್ನು ಅರಿಯುವ ಮೊದಲೇ ಅದನ್ನು ನಿಗ್ರಹಿಸುವ ಪ್ರಯತ್ನ ಕೂಡ ಮಾಡಬೇಡಿ. ಶುದ್ಧ ಭಕ್ತಿ ಅಥವಾ ಸರಿಯಾದ ಧ್ಯಾನದಿಂದ ಕಾಲಕ್ರಮೇಣ ಬಯಕೆಗಳು ತಂತಾನೆ ಹೊರಟುಹೋಗುತ್ತದೆ; ಇವೆರಡರ ಸಂಯೋಜನೆ ನಿಮ್ಮನ್ನು ತ್ವರಿತವಾಗಿ ಮುಕ್ತವಾಗಿಸುತ್ತದೆ.

ಆಂತರಿಕ ಆರಾಧನೆಯನ್ನು ಕಂಡುಕೊಳ್ಳುವ ತನಕ ಬಾಹ್ಯ ಆರಾಧನೆಯನ್ನು ನಿಲ್ಲಿಸಬೇಡಿ. ಸತ್ಯವು ಸ್ಥಿರವಾಗಿ ತೆರೆದುಕೊಳ್ಳಲಿ. ನೀವು ನಿಮ್ಮ ಪಥದಲ್ಲಿ ಘನತೆ, ದೃಢಸಂಕಲ್ಪ ಹಾಗೂ ಗೌರವದಿಂದ, ಮತ್ತು ಸತ್ಯಪರತೆ, ಕರುಣೆ, ಕ್ಷಮೆ, ಹಾಗೂ ಸಹಾನುಭೂತಿಯನ್ನು ಬಿಟ್ಟುಕೊಡದೆ ಕ್ರಮಿಸಿದರೆ, ನಿಮಗೆ ದೇವರ ಕೃಪೆ ಖಂಡಿತ ದೊರೆಯುತ್ತದೆ. ಇದರಲ್ಲಿ ನನಗೆ ಸಂಶಯವಿಲ್ಲ.

ಪರಿಶ್ರಮ ಮತ್ತು ಸೋಮಾರಿತನದ ಮಧ್ಯೆ, ಭೋಗ ಮತ್ತು ತ್ಯಾಗದ ಸಮಾನಾಂತರದಲ್ಲಿ, ಅದ್ಭುತವಾದ ಮಾರ್ಗವಿದೆ, ಅದೇ ಭಕ್ತಿಮಾರ್ಗ. 

ನನ್ನ ಮುಂದಿನ ಲೇಖನದಲ್ಲಿ, ಬಯಕೆಗಳ ವಿಷಯದ ಬಗ್ಗೆ ವಿಸ್ತರಿಸುವೆ. ಅದರ ಮೇಲೆ ಹಿಡಿತ ಸಿಕ್ಕಿದರೆ, ನೀವು ನಿಮ್ಮಲ್ಲಿ ಒಂದು ಆಮೂಲಾಗ್ರವಾದ ಹಾಗೂ ವ್ಯಾಪಕವಾದ ಬದಲಾವಣೆಯನ್ನು ಅನುಭವಿಸುತ್ತೀರಿ. ಕಾದು ನೋಡಿ, ಮುಂದಿನ ಲೇಖನ ಅಕ್ಟೋಬರ್ ಮೊದಲ ವಾರದಲ್ಲಿ ಬರುತ್ತದೆ. ನಾನು ನನ್ನ ಮುಂದಿನ ಸಾಧನೆಗೆ ಹೋಗುತ್ತಿದ್ದೇನೆ. ಅದು ಸೆಪ್ಟೆಂಬರ್ ಕೊನೆಯ ಒಳಗೆ ಮುಗಿಯುವುದಿಲ್ಲ.

ನಾನು ಒಂದು ಚೂರು ಹೊಟ್ಟೆ ತುಂಬಿಸಿಕೊಳ್ಳಲು ಹೊರಟೆ, ಅದೇ ಮಾತಲ್ಲಿ:
 ಜೀವನ ಒಂದು ಥಾಲಿ(ತಟ್ಟೆ) ಊಟದ ಹಾಗೆ. ನಿಮ್ಮ ಹೊಟ್ಟೆ ತುಂಬಾ ಹಸಿದಿದೆ, ಆದ್ದರಿಂದಲೇ ನೀವು ಅದನ್ನು ತರಲು ಹೇಳಿದ್ದೀರಿ, ಬಹುಶಃ ಅದು ನಿಮಗೆ ಮಿತವ್ಯಯ ಎನಿಸಿರಬಹುದು, ಅಥವಾ ಅದರಲ್ಲಿರುವ ಬಗೆಬಗೆ ಖಾದ್ಯ ನಿಮ್ಮ ಮನಸೆಳೆದಿರಬಹುದು. ಜೀವನದಲ್ಲೂ ಹಾಗೆಯೇ, ನೀವು ತೆಗೆದುಕೊಳ್ಳುವ ನಿರ್ಧಾರಗಳಿಗೆ ಸರಣಿಯ ಕಾರಣಗಳು ಅಥವಾ ತರ್ಕಗಳನ್ನು ಕೊಟ್ಟುಕೊಳ್ಳುತ್ತೀರಿ. ಥಾಲಿ ನಿಮ್ಮ ಮುಂದೆ ಬಂದಿದೆ, ವಾವ್!

ಥಾಲಿಯಲ್ಲಿ, ಎಲ್ಲಾ ಸ್ವಲ್ಪ ಸ್ವಲ್ಪ ಇದೆ, ಅದರಲ್ಲಿರುವ ತಿನಿಸುಗಳಲ್ಲಿ ಅರ್ಧಕ್ಕಿಂತ ಹೆಚ್ಚಿನದನ್ನು ನೀವು ಲಕ್ಷಿಸುವುದೂ ಇಲ್ಲ. ಕೆಲವೊಂದು ಖಾದ್ಯಗಳನ್ನು ನೀವು ಚೀಪಬೇಕು, ಕೆಲವೊಂದನ್ನು ಜಗಿಯಬೇಕು, ಕೆಲವೊಂದು ಕುಡಿಯಬೇಕು ಮತ್ತು ಇನ್ನೂ ಹಲವು ಖಾದ್ಯಗಳನ್ನು ನೀವು ಮುಟ್ಟುವುದೂ ಇಲ್ಲ. ನೀವು ಡೀಲಕ್ಸ್ ಥಾಲಿಯನ್ನು ತರಿಸಿದ್ದರೆ, ನಿಮ್ಮ ತಟ್ಟೆ ಕರಿದ ಪದಾರ್ಥಗಳು ಹಾಗೂ ಸಿಹಿ ತಿನಿಸುಗಳಿಂದ ತುಂಬಿ ಹೋಗಿರುತ್ತದೆ.

ಮೊದಲ ಕೆಲವು ತುತ್ತನ್ನು ತ್ವರಿತವಾಗಿ ಸೇವಿಸುತ್ತೀರಿ. ಕ್ಷೀಣಿಕೆಯ ಧರ್ಮ ಹಿಂತಿರುಗಿ ಬರುವತನಕ, ಪ್ರತಿಯೊಂದು ತುತ್ತೂ ಒಂದು ಐಷಾರಾಮಿ ತುತ್ತಾಗಿರುತ್ತದೆ. ನಂತರದ ತುತ್ತುಗಳು, ಮುಂಚಿನ ತೃಪ್ತಿಯನ್ನು ನೀಡುವುದರಲ್ಲಿ ಸೋಲುತ್ತದೆ. ಮೊದಲು ನೀವು ಹೇಗೆ ಪ್ರತಿಯೊಂದು ತುತ್ತನ್ನೂ ವಿವಿಧ ಮೇಲೋಗರಗಳ ಜೊತೆ ಸೇರಿಸಿ ಆಸ್ವಾದಿಸುತ್ತಿದ್ದಿರಿ, ಹಾಗೆ ಈಗ ಮಾಡುತ್ತಿಲ್ಲ. ಆ ಆಕರ್ಷಣೆ ವೇಗವಾಗಿ ನಾಪತ್ತೆಯಾಗುತ್ತಿದೆ.

ಈಗ, ನೀವು ಸಂಭಾಷಣೆಯಲ್ಲಿ ತೊಡಗಿದ್ದೀರಿ, ನಿಮ್ಮದೇ ಜೊತೆ ಅಥವಾ ನಿಮ್ಮ ಜೊತೆಗೆ ಯಾರಾದರೂ ಊಟಕ್ಕೆ ಕುಳಿತಿದ್ದರೆ ಅವರ ಜೊತೆ. ಅರೆ! ಈ ಪನ್ನೀರ್ ಅನ್ನು ಅವರು ಯಾಕೆ ಹುರಿಯುತ್ತಾರೆ! ಅವರಿಗೆ ತಿಳಿದಿಲ್ಲವೇ, ಹುರಿಯುವುದರಿಂದ ಇದು ತುಂಬಾ ಗಟ್ಟಿಯಾಗುತ್ತದೆ ಹಾಗೂ ರಸವತ್ತಾಗಿರುವುದಿಲ್ಲವೆಂದು.  ಅನ್ನದ ಬದಲಿಗೆ ಇನ್ನೂ ಎರಡು ಚಪಾತಿಯನ್ನು ಹೇಳಿರಬೇಕಿತ್ತು. ಈ ಮಿಶ್ರ ತರಕಾರಿ ಖಾದ್ಯ ನೋಡು, ಒಂದು ದೊಡ್ಡ ಆಲೂಗಡ್ಡೆ ಚೂರು, ಹಾಗೂ ಎರಡು ಹೋಳು ಹೂಕೋಸು ಇದೆ ಅಷ್ಟೇ. ಈ ತೊವ್ವೆ, ಇದೊಂದು ಆಘಾತ, ಇತ್ಯಾದಿ.

ನೀವು ಸಿಹಿತಿಂಡಿಯನ್ನು ಕೊನೆಯಲ್ಲಿ ತಿನ್ನಲು ಉಳಿಸಿಕೊಂಡಿರುವಿರಿ; ಹೊಟ್ಟೆಯಲ್ಲಿ ಜಾಗವಿಲ್ಲ, ಆದರೂ ಸ್ವಲ್ಪ ತಿನ್ನುತ್ತೀರಿ. ಏಕೆಂದರೆ, ನೀವು ದುಡ್ಡು ಕೊಟ್ಟಿದ್ದೀರಿ. ನೀವು ನಿಮ್ಮ ಮನಸ್ಸಿನ ಕಟ್ಟುಪಾಡುಗಳ ಕಾರಣದಿಂದಾಗಿ, ಬಿಟ್ಟುಕೊಡಲೂ ಆಗುವುದಿಲ್ಲ. ಮೇಲೋಗರ ಹಿಡಿದ ಕೈಯಿಂದ ಅಲ್ಲದಿದ್ದರೂ, ಎಣ್ಣೆ ಜಿಡ್ಡಿನ ಕೈಯಿಂದಲೇ, ನಿಮ್ಮ ಬಾಯಾರಿಕೆಯನ್ನು ಹೋಗಲಾಡಿಸಲು ನೀರಿನ ಲೋಟವನ್ನು ಎತ್ತುತ್ತೀರಿ. ಮೇಲೋಗರಗಳ ಎಣ್ಣೆ ಜಿಡ್ಡಿನಿಂದ ಕೂಡಿದ ಬಟ್ಟಲುಗಳನ್ನು ನೋಡಿ, ನಿಮಗೆ, ಅಹಿತ ಮೂಡಿಕೆ ಬರುತ್ತದೆ. ನಿಮಗೆ ಅನಿಸುತ್ತದೆ, ನೀವು ಸರಿಯಾದ ಆಯ್ಕೆ ಮಾಡಿದಿರೋ, ಇಲ್ಲವೋ ಎಂದು. ಆದರೆ ಎಲ್ಲಾ ಮುಗಿದಿದೆ. ಏನು ಗಮನಾರ್ಹವೆಂದರೆ, ನೀವು, ಮುಂದಿನ ಬಾರಿ ಅದೇ ಥಾಲಿಯನ್ನು ತೆಗೆದುಕೊಳ್ಳುವ ಪ್ರತಿಯೊಂದು ಸಾಧ್ಯತೆಯೂ ಇದೆ.

 ಅದರ ಹಾಗೆಯೇ, ಜೀವನವೆಂದರೆ ಆಯ್ಕೆಗಳು. ನಿಮ್ಮ ಥಾಲಿಯಲ್ಲಿನ ಬಗೆಬಗೆಯ ಖಾದ್ಯಗಳ ಹಾಗೆ, ಮೊದಮೊದಲು ಭ್ರಮೆ ಹಾಗೂ ಜಾರಿಹೋಗುವ ಪ್ರಪಂಚದ ವಿಲಾಸಗಳು ನಿಮ್ಮನ್ನು ಸೆಳೆಯುತ್ತದೆ. ಕೊನೆಕೊನೆಗೆ, ನಿಮಗೆ ಬಳಲಿಕೆಯಾಗಿಬಿಡುತ್ತದೆ – ಅನುಭವಿಸುವುದರಿಂದಾಗುವ ಬಳಲಿಕೆಯಲ್ಲ, ಆದರೆ ಆನಂದವನ್ನು ಉಳಿಸಿಕೊಳ್ಳಲಾಗದಿರುವ ಅಸಮರ್ಥತೆಯ ಬಳಲಿಕೆ, ಅತೃಪ್ತಿಯ ಒಂದು ಸೂಕ್ಷ್ಮ ಭಾವನೆ ನಿಮ್ಮನ್ನು ಬಿಡುವುದಿಲ್ಲ.

ಯಾವುದನ್ನು ಉಳಿಸಿಕೊಳ್ಳಬೇಕು, ಪ್ರತಿಯಾಗಿ ಯಾವುದನ್ನು ತೊರೆಯಬೇಕು ಎಂದು ನೀವು ಅನಿಶ್ಚಿತರಾಗುವಿರಿ. ಥಾಲಿಯನ್ನು ವಿಶ್ಲೇಷಿಸಿದಂತೆ, ನೀವು ನಿಮ್ಮ ಜೀವನದ ಆಯ್ಕೆಗಳನ್ನು ವಿಶ್ಲೇಷಿಸುವಿರಿ, ಮತ್ತು ನಿಮ್ಮ ಭೂತ ಹಾಗೂ ಭವಿಷ್ಯದ ವಿಷಯಗಳಲ್ಲಿನ ಹಾರೈಕೆಗಳನ್ನು ನೆರವೇರಿಸುತ್ತಾ, ಆಸೆಗಳನ್ನು ಜೀವಂತವಾಗಿಡುತ್ತೀರಿ. ನಿಮ್ಮ ಅತ್ಯುತ್ತಮವಾದುದನ್ನು ಅಂತಿಮಕ್ಕೆ ಉಳಿಸಿಕೊಳ್ಳುತ್ತೀರಿ. ಆದರೆ “ಅಂತ್ಯ” ತಲುಪಿದಾಗ, ನಿಮಗೆ ಅದರ ಹಸಿವಿರುವುದಿಲ್ಲ. ನಾಲಿಗೆಯ ಕಡುಬಯಕೆಗಳು, ಜೀರ್ಣಕ್ರಿಯೆಯ ವಾಸ್ತವಿಕತೆಗೆ ಕುಗ್ಗುತ್ತದೆ. ಕಟ್ಟಕಡೆಗೆ, ಒಂದು ಲೋಟ ಪರಿಶುದ್ಧ ನೀರು, ನಿಮ್ಮ ದಾಹವನ್ನು ತೀರಿಸುತ್ತದೆ. ಅದರಲ್ಲಿ ಯಾವುದೇ ಪೌಷ್ಟಿಕಾಂಶವಿಲ್ಲ, ಬೆಲೆ ಚೀಟಿಯಿಲ್ಲ, ಅಥವಾ ಖಾಲಿಯಾದಾಗ ತುಂಬಿಸಿಕೊಳ್ಳುವುದಕ್ಕೆ ಷರತ್ತುಗಳಿಲ್ಲ. ಅದು ಪ್ರಕೃತಿಯ ಕೊಡುಗೆ, ಹಾಗೂ ಅದರ ಪರಿಶುದ್ಧತೆಯೇ, ನಿಮಗೆ ಆತ್ಮತೃಪ್ತಿ ಕೊಡುವ ಪ್ರಮುಖ ಅಂಶ.

ಹೋಗಿ, ಆನಂದಿಸಿ! ಥಾಲಿಯನ್ನು ತೆಗೆದುಕೊಳ್ಳಿ. ಆತ್ಮಕ್ಕೂ ಒಂದು ತೆಗೆದುಕೊಂಡರೆ ಹೇಗೆ?

ಪುನರ್ಭರ್ತಿ, ಯಾರಾದರೂ?

ಶಾಂತಿ,
 ಸ್ವಾಮಿ.

Translated from: Bhakti – Devotional Service

Edited by: H. R. Ravi Kumar, Retd. Engineer, Shimoga.

Painting inspired by(copied from😛) https://youtu.be/Y4oXatiZ2JQ